ಮಂಗಳೂರು: ಪ್ರೀತಿಯ ಹೆಸರಿನಲ್ಲಿ ವಂಚನೆ ಹಾಗೂ ದೈಹಿಕ ಶೋಷಣೆಗೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಸೇರಿದಂತೆ ಗಂಭೀರ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಡೆತ್ ನೋಟ್‌ನಲ್ಲಿ ಗಂಭೀರ ಆರೋಪ
ಮೃತ ಬಾಲಕಿ ಏಪ್ರಿಲ್ 23 ರಂದು ಸಂಜೆ ಸುಮಾರು 4 ಗಂಟೆಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುನ್ನ ಆಕೆ ಪೋಷಕರ ಹೆಸರಿಗೆ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ, “ನಾನು ದೊಡ್ಡ ತಪ್ಪು ಮಾಡಿದ್ದೇನೆ, ಆದರೆ ಅವನು ಮಾತ್ರ ಸಂತೋಷವಾಗಿದ್ದಾನೆ. ಅವನು ಹಿಂದೂ ಸಂಘಟನೆಗಳ ಜೊತೆಗಿದ್ದರೂ ಸಹ, ಆ ಸಂಘಟನೆಗಳು ನನಗೆ ಯಾವುದೇ ಸಹಾಯ ಮಾಡಲಿಲ್ಲ” ಎಂದು ಬಾಲಕಿ ತನ್ನ ಅಳಲನ್ನು ಡೆತ್‌ನೋಟ್‌ನಲ್ಲಿ ತೋಡಿಕೊಂಡಿದ್ದಾಳೆ.
ಬಾಲಕಿಯ ಆತ್ಮಹತ್ಯೆಯ ಬಳಿಕ ರಾತ್ರಿ 11 ಗಂಟೆಯ ಸುಮಾರಿಗೆ ಆಕೆಯ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಆರೋಪಿ ಅನೀಶ್ ಪೂಜಾರಿ ಎಂಬಾತನೇ ಮಗಳ ಸಾವಿಗೆ ನೇರ ಕಾರಣವಾಗಿದ್ದು, ಆಕೆ ಗರ್ಭಿಣಿಯಾಗಿದ್ದಳು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಷಕರ ದೂರಿನ ಅನ್ವಯ ತಡರಾತ್ರಿ 1 ಗಂಟೆಗೆ ಸುರತ್ಕಲ್ ಪೊಲೀಸರು ಆರೋಪಿ ಅನೀಶ್ ಪೂಜಾರಿ ವಿರುದ್ಧ ಪೋಕ್ಸೋ (POCSO) ಕಾಯ್ದೆ, ಅತ್ಯಾಚಾರ (Rape) ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದ್ಯ ಬಾಲಕಿಯ ಮರಣೋತ್ತರ ಪರೀಕ್ಷೆ (Postmortem) ಪೂರ್ಣಗೊಂಡಿದ್ದು, ವೈದ್ಯರು ಮುಂದಿನ ಡಿಎನ್‌ಎ (DNA) ಪರೀಕ್ಷೆಗಾಗಿ ಭ್ರೂಣದ ಮಾದರಿಯನ್ನು ಸಂಗ್ರಹಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಅನೀಶ್ ಪೂಜಾರಿಯನ್ನು ವಶಕ್ಕೆ ಪಡೆಯಲು ಪೊಲೀಸರ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.