• Home  
  • ಪೋಪ್ 14 ನೇ ಲಿಯೊ ಇವರ ಬಗ್ಗೆ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮಂಗಳೂರು ಧರ್ಮಪ್ರಾಂತ್ಯ ಖಂಡನೆ
- COMMUNITY NEWS - LATEST NEWS

ಪೋಪ್ 14 ನೇ ಲಿಯೊ ಇವರ ಬಗ್ಗೆ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮಂಗಳೂರು ಧರ್ಮಪ್ರಾಂತ್ಯ ಖಂಡನೆ

ಮಂಗಳೂರು :ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರೈಸ್ತ ಜಗದ್ಗುರು ಪರಮ ಪೂಜ್ಯ ಪೋಪ್ 14ನೇ ಲಿಯೋ ರವರ ವಿರುದ್ಧ ಇತ್ತೀಚೆಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಮಂಗಳೂರು ಧರ್ಮಪ್ರಾಂತ್ಯವು ತೀವ್ರವಾಗಿ ಖಂಡಿಸುತ್ತದೆ. ಪರಮೋಚ್ಛ ಗುರುಗಳ ವಿರುದ್ಧದ ಇಂತಹ ಮಾತುಗಳು ಮಂಗಳೂರಿನ, ಭಾರತದ ಮತ್ತು ವಿಶ್ವದಾ ದ್ಯಂತದ ಕ್ಯಾಥೊಲಿಕರಿಗೆ ಅತೀವ ನೋವುಂಟು ಮಾಡಿವೆ. ಏಕೆಂದರೆ ಅವರು ಪೋಪರನ್ನು ಸಂತ ಪೇತ್ರರ ಉತ್ತರಾಧಿಕಾರಿ ಮತ್ತು ಕ್ರೈಸ್ತ ಧರ್ಮಸಭೆಯ ಮುಖ್ಯಸ್ಥರೆಂದು ಗೌರವಿಸುತ್ತಾರೆ. ಪೋಪ್ ರವರನ್ನು ಅವಮಾನಿಸುವ ಮೂಲಕ ಕೋಟ್ಯಂತರ ಕ್ರೈಸ್ತ ವಿಶ್ವಾಸಿಗಳ […]

Share News

ಮಂಗಳೂರು :ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರೈಸ್ತ ಜಗದ್ಗುರು ಪರಮ ಪೂಜ್ಯ ಪೋಪ್ 14ನೇ ಲಿಯೋ ರವರ ವಿರುದ್ಧ ಇತ್ತೀಚೆಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಮಂಗಳೂರು ಧರ್ಮಪ್ರಾಂತ್ಯವು ತೀವ್ರವಾಗಿ ಖಂಡಿಸುತ್ತದೆ.

ಪರಮೋಚ್ಛ ಗುರುಗಳ ವಿರುದ್ಧದ ಇಂತಹ ಮಾತುಗಳು ಮಂಗಳೂರಿನ, ಭಾರತದ ಮತ್ತು ವಿಶ್ವದಾ ದ್ಯಂತದ ಕ್ಯಾಥೊಲಿಕರಿಗೆ ಅತೀವ ನೋವುಂಟು ಮಾಡಿವೆ. ಏಕೆಂದರೆ ಅವರು ಪೋಪರನ್ನು ಸಂತ ಪೇತ್ರರ ಉತ್ತರಾಧಿಕಾರಿ ಮತ್ತು ಕ್ರೈಸ್ತ ಧರ್ಮಸಭೆಯ ಮುಖ್ಯಸ್ಥರೆಂದು ಗೌರವಿಸುತ್ತಾರೆ. ಪೋಪ್ ರವರನ್ನು ಅವಮಾನಿಸುವ ಮೂಲಕ ಕೋಟ್ಯಂತರ ಕ್ರೈಸ್ತ ವಿಶ್ವಾಸಿಗಳ ನಂಬಿಕೆ ಮತ್ತು ಭಾವನೆಗಳನ್ನು ಘಾಸಿಗೊಳಿಸಲಾಗಿದೆ.

ಸಾರ್ವಜನಿಕ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಪ್ರಜಾಪ್ರಭುತ್ವದ ಭಾಗವಾಗಿದ್ದರೂ, ಧಾರ್ಮಿಕ ಮುಖಂಡರ ಮೇಲೆ ವೈಯಕ್ತಿಕ ದಾಳಿಗಳು ನಾಗರಿಕ ಸಂವಾದದಲ್ಲಿ ಸ್ಥಾನ ಪಡೆಯಬಾರದು. ಅವು ಪರಸ್ಪರ ಗೌರವವನ್ನು ಕುಂದಿಸುತ್ತವೆ, ಅಂತರಧರ್ಮೀಯ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಮತ್ತು ಸಾರ್ವಜನಿಕ ಜೀವನದ ಘನತೆಯನ್ನು ಕುಗ್ಗಿಸುತ್ತವೆ.

ಎಲ್ಲಾ ನಾಯಕರು ಮತ್ತು ಪ್ರಭಾವಿ ವ್ಯಕ್ತಿಗಳು ಸಾರ್ವಜನಿಕ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಮತ್ತು ಇತರರ ಧಾರ್ಮಿಕ ನಂಬಿಕೆಗಳನ್ನು ಕೀಳಾಗಿ ಕಾಣುವ ಮಾತುಗಳಿಂದ ದೂರವಿರಬೇಕೆಂಬುದು ನಾವು ಬಲವಾಗಿ ಪ್ರತಿಪಾದಿಸುತ್ತೇವೆ. ಮಂಗಳೂರು ಧರ್ಮಪ್ರಾಂತ್ಯವು ಪೋಪ್ 14ನೇ ಲಿಯೋ ರವರಿಗೆ ತನ್ನ ಅಚಲ ಧಾರ್ಮಿಕ ನಿಷ್ಟೆ ಹಾಗೂ ವಿಧೇಯತೆ ಯನ್ನು ಪುನರುಚ್ಚರಿಸುತ್ತದೆ ಮತ್ತು ಶಾಂತಿ, ನ್ಯಾಯ ಹಾಗೂ ಬಡವರ ಸೇವೆಗಾಗಿ ಅವರ ನಾಯಕತ್ವವು ಜಗತ್ತಿಗೆ ಮಾರ್ಗದರ್ಶಿಯಾಗಲಿ ಎಂದು ಪ್ರಾರ್ಥಿಸುತ್ತದೆ.

ಇಂತಹ ಸಂದರ್ಭಗಳಲ್ಲಿ ನಮ್ಮ ಪರಮಪೂಜ್ಯ ಪೋಪ್‌ ಹಾಗೂ ಅಧಿಕಾರ ಸ್ಥಾನದಲ್ಲಿರುವ ಎಲ್ಲಾ ಪ್ರಭಾವಿ ವ್ಯಕ್ತಿಗಳು ಸತ್ಯ ಮತ್ತು ಪರಸ್ಪರ ಗೌರವದ ಹಾದಿಯಲ್ಲಿ ನಡೆಯುವಂತೆ, ಅವರಿಗಾಗಿ ಪ್ರಾರ್ಥಿಸಲು ನಾವು ಕ್ರೈಸ್ತ ವಿಶ್ವಾಸಿಗಳನ್ನು ವಿನಂತಿಸುತ್ತೇವೆ.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು ಮತ್ತು ಎಲ್ಲಾ ವಿಶ್ವಾಸಿಗಳ ಪರವಾಗಿ, ಈ ಪ್ರಕಟಣೆ ಯನ್ನು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ. ಡಾ. ಜೆ. ಬಿ. ಸಲ್ಡಾನ್ಹಾ ಮತ್ತು ರೊಯ್ ಕ್ಯಾಸ್ತೆಲಿನೊ ಅವರು ಬಿಡುಗಡೆ ಮಾಡಿದ್ದಾರೆ.

Share News