ರೋಮ್: ವ್ಯಾಟಿಕನ್‌ನಲ್ಲಿ ಹೊಸ ಪರ್ವವೊಂದು ಆರಂಭವಾಗಿದೆ. ಪೋಪ್ ಲಿಯೋ XIV ಅವರು ಹಳೆಯ ಸಂಪ್ರದಾಯಕ್ಕೆ ಮರುಜೀವ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಕ್ರಿಶ್ಚಿಯನ್ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಹೋಲಿ ಥರ್ಸ್ ಡೇ’ ಅಥವಾ ಪವಿತ್ರ ಗುರುವಾರದಂದು ರೋಮ್‌ನ ಸೇಂಟ್ ಜಾನ್ ಲ್ಯಾಟರ್ನ್ ಬೆಸಿಲಿಕಾದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಪೋಪ್ ಲಿಯೋ XIV ಅವರು 12 ಮಂದಿ ಪಾದ್ರಿಗಳ ಪಾದಗಳನ್ನು ತೊಳೆಯುವ ಮೂಲಕ ‘ಪಾದಕ್ಷಾಲನೆ’ ಸಂಪ್ರದಾಯವನ್ನು ಪುನರಾರಂಭಿಸಿದರು.
ಕಳೆದ ಹಲವು ವರ್ಷಗಳಿಂದ ಪೋಪ್ ಫ್ರಾನ್ಸಿಸ್ ಅವರು ಈ ಸಂಪ್ರದಾಯದಲ್ಲಿ ಮಹತ್ತರ ಬದಲಾವಣೆ ತಂದಿದ್ದರು. ಅವರು ಜೈಲುಗಳು, ಬಾಲಾಪರಾಧಿ ಕೇಂದ್ರಗಳು ಮತ್ತು ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ ಸಾಮಾನ್ಯ ಜನರು, ಮಹಿಳೆಯರು ಮತ್ತು ಕ್ರಿಶ್ಚಿಯೇತರರ ಪಾದಗಳನ್ನು ತೊಳೆಯುತ್ತಿದ್ದರು. ಆದರೆ, ಪೋಪ್ ಲಿಯೋ XIV ಅವರು ಈ ಬಾರಿ ಕೇವಲ ಪಾದ್ರಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಮೂಲಕ ವ್ಯಾಟಿಕನ್‌ನ ಹಳೆಯ ಪದ್ಧತಿಯನ್ನು ಮತ್ತೆ ಜಾರಿಗೆ ತಂದಿದ್ದಾರೆ.
ಈ 12 ಪಾದ್ರಿಗಳಲ್ಲಿ 11 ಮಂದಿಗೆ ಕಳೆದ ವರ್ಷವಷ್ಟೇ ಪೋಪ್ ಅವರು ಸ್ವತಃ ದೀಕ್ಷೆ ನೀಡಿದ್ದರು. ಇವರ ಜೊತೆಗೆ ರೋಮ್ ಡಯಾಸಿಸ್‌ನ ಸೆಮಿನರಿ ನಿರ್ದೇಶಕ ರೆನ್ಜೊ ಚಿಯೆಸಾ ಕೂಡ ಭಾಗವಹಿಸಿದ್ದರು. ಚಿನ್ನದ ಪಾತ್ರೆಯಿಂದ ನೀರನ್ನು ಸುರಿದು ಪಾದಗಳನ್ನು ತೊಳೆದು, ಬಿಳಿ ಬಟ್ಟೆಯಿಂದ ಒರೆಸಿ ನಂತರ ಪಾದಗಳಿಗೆ ಮುತ್ತಿಡುವ ಮೂಲಕ ಪೋಪ್ ನಮ್ರತೆಯನ್ನು ಮೆರೆದರು.
ಇದೇ ವೇಳೆ ನೀಡಿದ ಸಂದೇಶದಲ್ಲಿ ” ನಾವು ಇತರರನ್ನು ಅಧೀನದಲ್ಲಿಟ್ಟುಕೊಂಡಾಗ ನಮ್ಮನ್ನು ನಾವು ಶಕ್ತಿಶಾಲಿಗಳು ಎಂದು ಭಾವಿಸುತ್ತೇವೆ. ಭಯ ಹುಟ್ಟಿಸಿದಾಗ ನಾವು ಶ್ರೇಷ್ಠರು ಅಂದುಕೊಳ್ಳುತ್ತೇವೆ. ಆದರೆ ನಿಜವಾದ ದೈವತ್ವವಿರುವುದು ನಿಸ್ವಾರ್ಥ ಸೇವೆ ಮತ್ತು ಪ್ರೀತಿಯಲ್ಲಿ. ಯೇಸುಕ್ರಿಸ್ತನು ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ನಮಗೆ ಇದನ್ನೇ ಕಲಿಸಿಕೊಟ್ಟಿದ್ದಾನೆ ಎಂದರು. ಯುದ್ಧ ಮತ್ತು ಹಿಂಸಾಚಾರದ ವಿರುದ್ಧವೂ ಧ್ವನಿ ಎತ್ತಿದ ಪೋಪ್, ಈ ವಿಧಿಯು ಕೇವಲ ಆಚರಣೆಯಲ್ಲ, ಇದು ಅಹಂಕಾರವನ್ನು ಮರೆತು ಸೇವೆ ಮಾಡುವ ಸಂಕಲ್ಪ ಎಂದು ಕರೆ ನೀಡಿದರು.