ಮಂಗಳೂರು: ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ನಂತರ ಸತತ 3 ಬಾರಿ ದೇಶದ ಪ್ರಧಾನಿಯಾಗಿ ಜನಸೇವೆಗೆ ಪಾದಾರ್ಪಣೆ ಮಾಡಿ 25 ವರ್ಷಗಳನ್ನು ಪೂರೈಸಿದ ಐತಿಹಾಸಿಕ ಸಂದರ್ಭದ ಅಂಗವಾಗಿ, ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಾಳೆ (ಅಕ್ಟೋಬರ್ 7, ಬುಧವಾರ) ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ಬೃಹತ್ ಸೇವಾ ಜ್ಯೋತಿ ಯಾತ್ರೆ, ವಾಹನ ಜಾಥಾ ಹಾಗೂ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು, ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದ್ದಾರೆ:
8 ವಿಧಾನಸಭಾ ಕ್ಷೇತ್ರಗಳಿಂದ ಬಂಟರ ಭವನಕ್ಕೆ ನೇರವಾಗಿ ಸಂಗಮವಾಗಲಿರುವ ಸೇವಾ ಜ್ಯೋತಿ:
2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರು ಕಳೆದ ಕಾಲು ಶತಮಾನದಿಂದ ಯಾವುದೇ ಕಪ್ಪುಚುಕ್ಕೆಯಿಲ್ಲದೆ, ನಿಸ್ವಾರ್ಥವಾಗಿ ದೇಶವನ್ನು ಮುನ್ನಡೆಸುತ್ತಾ ವಿಕಸಿತ ಭಾರತ 2047ರ ನವ ಸಂಕಲ್ಪಕ್ಕೆ ನಾಂದಿ ಹಾಡಿದ್ದಾರೆ. ಅವರ ಈ ಸಾರ್ಥಕ ಜನಸೇವೆಯನ್ನು ಸಂಭ್ರಮಿಸಲು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಾದ ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಮಂಗಳೂರು (ಉಳ್ಳಾಲ), ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೂ ಮೂಡುಬಿದಿರೆ ಕ್ಷೇತ್ರಗಳಿಂದ ಪ್ರತ್ಯೇಕವಾಗಿ ಸೇವಾ ಜ್ಯೋತಿಗಳು ಹಾಗೂ ಬೃಹತ್ ವಾಹನ ಜಾಥಾಗಳು ಹೊರಡಲಿವೆ. ಈ ಎಲ್ಲಾ ಜ್ಯೋತಿಗಳು ಅಂದು ಬೆಳಗ್ಗೆ ನೇರವಾಗಿ ಬಂಟ್ವಾಳದ ಬಂಟರ ಭವನಕ್ಕೆ ತಲುಪಿ ಒಗ್ಗೂಡಲಿವೆ. ಈ ಸಂಪೂರ್ಣ ‘ಸೇವಾ ಜ್ಯೋತಿ ಯಾತ್ರೆ’ಯ ಸಮಗ್ರ ಜಿಲ್ಲಾ ಉಸ್ತುವಾರಿಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯತೀಶ್ ಅರ್ವಾರ್ ಅವರು ವಹಿಸಿಕೊಂಡಿದ್ದಾರೆ.
ಬಂಟರ ಭವನದಲ್ಲಿ ಬೃಹತ್ ಸಮಾವೇಶ:
ಅಕ್ಟೋಬರ್ 7 ರಂದು ಬೆಳಗ್ಗೆ 10:00 ಗಂಟೆಗೆ ಬಂಟ್ವಾಳದ ಬಂಟರ ಭವನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರು ಭಾಗವಹಿಸಿ ಸಭೆಯನ್ನುದ್ದೇಶಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ. ಸಮಾವೇಶದ ಅಧ್ಯಕ್ಷತೆಯನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶ್ರೀ ವೇದವ್ಯಾಸ್ ಕಾಮತ್, ಡಾ. ವೈ. ಭರತ್ ಶೆಟ್ಟಿ, ಶ್ರೀ ಹರೀಶ್ ಪೂಂಜ, ಶ್ರೀಮತಿ ಭಾಗೀರಥಿ ಮುರುಳ್ಯ, ಶ್ರೀ ಉಮಾನಾಥ ಕೋಟ್ಯಾನ್ ಹಾಗೂ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ:
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನಿಸ್ವಾರ್ಥ ದೇಶಸೇವೆಯ 25 ವರ್ಷಗಳ ಸಾರ್ಥಕ ಯಾನಕ್ಕೆ ಕೃತಜ್ಞತೆ ಸಲ್ಲಿಸಲು ಜಿಲ್ಲೆಯ ಸಮಸ್ತ ರಾಷ್ಟ್ರಭಕ್ತ ನಾಗರಿಕರು, ಯುವಕರು, ತಾಯಂದಿರು ಹಾಗೂ ಪಕ್ಷದ ಕಾರ್ಯಕರ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವಾಹನ ಜಾಥಾ ಹಾಗೂ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಹೃತ್ಪೂರ್ವಕವಾಗಿ ಕರೆ ನೀಡಿದ್ದಾರೆ.
