ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಹಾಗೂ ಕೈಗಾರಿಕಾ ರಂಗಕ್ಕೆ ಹೊಸ ಶಕ್ತಿ ತುಂಬಲಿರುವ ಗಂಜಿಮಠದಲ್ಲಿ ನಿರ್ಮಾಣ ಹಂತದಲ್ಲಿರುವ ಮಹತ್ವಾಕಾಂಕ್ಷೆಯ ಪ್ಲಾಸ್ಟಿಕ್ ಪಾರ್ಕ್ ಯೋಜನಾ ಪ್ರದೇಶಕ್ಕೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.

ಭೇಟಿ ವೇಳೆ ಸಂಸದರು ಪಾರ್ಕ್‌ನ ರಸ್ತೆ, ವಿದ್ಯುತ್, ನೀರು ಸರಬರಾಜು ಸೇರಿದಂತೆ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಂಸದರು, ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಶೀಘ್ರದಲ್ಲೇ ಪೂರ್ಣ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಗೆ ಚಾಲನೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
*ಸಂಸದರ ಮುತುವರ್ಜಿ: ವೇಗ ಪಡೆದುಕೊಂಡ ಯೋಜನೆ*
ಗಂಜಿಮಠದ 104 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತುತ್ತಿರುವ ಈ ಬೃಹತ್ ಯೋಜನೆಗೆ ಕೇಂದ್ರದ ಮಾಜಿ ಸಚಿವ ದಿವಂಗತ ಡಿ. ಅನಂತ ಕುಮಾರ್ ಅವರು ರಾಸಾಯನಿಕ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. ಆದರೆ, 9.33 ಎಕರೆ ಭೂಸ್ವಾಧೀನ ಪ್ರಕ್ರಿಯೆಯು ನ್ಯಾಯಾಲಯದ ವಿವಾದದಲ್ಲಿದ್ದ ಕಾರಣ ಯೋಜನೆ ಸುದೀರ್ಘ ಕಾಲ ನನೆಗುದಿಗೆ ಬಿದ್ದಿತ್ತು.
ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದರಾಗಿ ಆಯ್ಕೆಯಾದ ತಕ್ಷಣವೇ ಈ ಯೋಜನೆಗೆ ಆದ್ಯತೆ ನೀಡಿ ಪರಿಶೀಲಿಸಿದಾಗ, ಯಾವುದೇ ಕಾಮಗಾರಿ ಪ್ರಗತಿ ಕುಂಠಿತಗೊಂಡಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಂಸದರು, ವಿವಾದಿತ ಜಾಗವನ್ನು ಸದ್ಯಕ್ಕೆ ಕೈಬಿಟ್ಟು, ಲಭ್ಯವಿರುವ ಭೂಮಿಯಲ್ಲೇ ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಶೀಘ್ರ ಅನುಷ್ಠಾನಕ್ಕೆ ತರುವಂತೆ ಕೆಐಎಡಿಬಿ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದು ನಿರ್ದೇಶನ ನೀಡಿದ್ದರು. ನವೆಂಬರ್ 2024ರಲ್ಲಿ ಸಿಪೆಟ್ (CIPET) ಆಡಳಿತ ಕಟ್ಟಡದ ಪರಿಷ್ಕೃತ ನಕ್ಷೆಗೆ ಅಧಿಕೃತ ಅನುಮೋದನೆ ದೊರೆತು ಮರು ನಿರ್ಮಾಣ ಕಾರ್ಯ ಚುರುಕುಗೊಂಡಿತ್ತು. ಆ ಬಳಿಕ ಎದುರಾಗಿದ್ದ ಕಾನೂನು ಅಡೆತಡೆಗಳನ್ನು ಅಕ್ಟೋಬರ್ 2025ರಲ್ಲಿ ಯಶಸ್ವಿಯಾಗಿ ತೆರವುಗೊಳಿಸಲಾಯಿತು. ರಿಟ್ ಅಪೀಲ್ ವಜಾಗೊಳ್ಳುವ ಮೂಲಕ ಯೋಜನೆಗಿದ್ದ ಎಲ್ಲಾ ಪ್ರಮುಖ ಕಾನೂನು ತೊಂದರೆಗಳು ಸಂಪೂರ್ಣ ನಿವಾರಣೆಯಾದವು. ಇದರ ಮುಂದುವರಿದ ಭಾಗವಾಗಿ, ಇತ್ತೀಚೆಗೆ ಅಂದರೆ ಮಾರ್ಚ್ 2026ರಲ್ಲಿ ಪಾರ್ಕ್‌ನ ಪರಿಷ್ಕೃತ ವಿನ್ಯಾಸದ ನಕ್ಷೆಗೆ ಅಧಿಕೃತವಾಗಿ ಸರ್ಕಾರದ ಅನುಮೋದನೆ ದೊರೆತಿದ್ದು, ಏಪ್ರಿಲ್ 2026ರಲ್ಲಿ ಉದ್ಯಮಿಗಳಿಗೆ ಕೈಗಾರಿಕಾ ಪ್ಲಾಟ್‌ಗಳ ಹಂಚಿಕೆ ಪ್ರಕ್ರಿಯೆಗಾಗಿ ಕೆಐಎಡಿಬಿ ವತಿಯಿಂದ ಅಧಿಕೃತ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, “ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಕರಾವಳಿಯ ಆರ್ಥಿಕತೆ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಈ ಪ್ಲಾಸ್ಟಿಕ್ ಪಾರ್ಕ್ ಪ್ರಮುಖ ಪಾತ್ರ ವಹಿಸಲಿದೆ. ಇದು ಸ್ಥಳೀಯ ಯುವಕರಿಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಕಲ್ಪಿಸುವುದಲ್ಲದೆ, ಪರಿಸರ ಪೂರಕ ನಿಯಮಗಳನ್ನು ಪಾಲಿಸಿಕೊಂಡು, ಆಧುನಿಕ ತಂತ್ರಜ್ಞಾನದೊಂದಿಗೆ ಜಿಲ್ಲೆಯ ಕೈಗಾರಿಕಾ ವಿಕಾಸಕ್ಕೆ ಹೊಸ ವೇಗ ನೀಡಲಿದೆ. ಈಗ ಪ್ಲಾಸ್ಟಿಕ್ ಪಾರ್ಕ್‌ನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಸದ್ಯ ಸಿಪೆಟ್ ಆಡಳಿತ ಮಂಡಳಿ ಕಟ್ಟಡದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದೆ. ಹೀಗಾಗಿ ಆಸಕ್ತ ಉದ್ಯಮಿಗಳು ಮುಂದೆ ಬಂದು ಇಲ್ಲಿನ ಕೈಗಾರಿಕಾ ಪ್ಲಾಟ್‌ಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು” ಎಂದು ವಿನಂತಿಸಿಕೊಂಡಿದ್ದಾರೆ.