ವಿಟ್ಲ ,ಜೂನ್.15 ಪೆರುವಾಯಿ ಮೂಲಕ ಹಾದು ಹೋಗಿರುವ ಅಂತಾರಾಜ್ಯ ಮುಖ್ಯ ರಸ್ತೆ ಅಪಘಾತದ ರಹದಾರಿಯಾಗಿದ್ದು, ವಾರದೊಳಗೆ ಒಂದೇ ಜಾಗದಲ್ಲಿ ಎರಡು ವಾಹನಗಳು ನದಿಗೆ ಬಿದ್ದಿವೆ. ರವಿವಾರ ರಾತ್ರಿ ಐವರು ಪ್ರಯಾಣಿಸುತ್ತಿದ್ದ ಕಾರು ನದಿಗೆ ಬಿದ್ದಿದ್ದು, ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೆರುವಾಯಿ ಗ್ರಾಮದ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸೇತುವೆ ಈಗ ಸರಣಿ ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ. ನಿನ್ನೆ ರಾತ್ರಿ ಸುಮಾರು 11:30 ಗಂಟೆಗೆ ಐವರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರೊಂದು ನಿಯಂತ್ರಣ ತಪ್ಪಿ ಇಲ್ಲಿನ ಕಿರಿದಾದ ಸೇತುವೆಯಿಂದ ಕೆಳಗೆ ಬಿದ್ದಿದೆ. ಕಳೆದ ಹತ್ತು ದಿನಗಳಲ್ಲಿ ಇದೇ ಜಾಗದಲ್ಲಿ ನಡೆದ ಎರಡನೇ ಅಪಘಾತ ಇದಾಗಿದೆ.
ಅವ್ಯವಸ್ಥೆಯ ಸೇತುವೆ
ಪೆರುವಾಯಿ ಸಮೀಪ ಮುಖ್ಯ ರಸ್ತೆಗೆ ಸೇತುವೆ ಇದ್ದು, ಅವ್ಯವಸ್ಥೆಯಿಂದ ಕೂಡಿದೆ. ತೀರಾ ತಗ್ಗಿನಲ್ಲಿ ಸೇತುವೆ ಇದೆ. ಅಲ್ಲದೆ, ಸೇತುವೆಯಲ್ಲಿ ಯಾವುದೇ ಸುರಕ್ಷತಾ ತಡೆಗಳಿಲ್ಲ. ಯಾವುದೇ ತಡೆ ಬೇಲಿ ಇಲ್ಲ. ಇದರಿಂದಾಗಿ ಮತ್ತೆ ಮತ್ತೆ ಅಪಘಾತಗಳು ಸಂಭವಿಸುತ್ತಿವೆ. ಪ್ರಮುಖವಾಗಿ ಇಳಿಜಾರು ರಸ್ತೆ ಹಾಗೂ ಸೇತುವೆ ಬಳಿ ಏಕಾಏಕಿ ಎಲ್ ಆಕಾರದ ತಿರುವು ಅಪಘಾತಗಳಿಗೆ ಕಾರಣವಾಗುತ್ತಿದೆ.
ಕಿರಿದಾದ ರಸ್ತೆ ಬೆರಿಪದವು ಬಳಿಯಿಂದ ಕೇರಳವಾಗಿ ಸಾಗುವ ಈ ರಸ್ತೆ ಪೆರುವಾಯಿ ಜಂಕ್ಷನ್ ಬಳಿಕ ಕಿರಿದಾಗಿದೆ. ರಸ್ತೆ ಅಗಲೀಕರಣಗೊಳ್ಳಬೇಕು ಎಂಬ ಹೋರಾಟಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಏಕಕಾಲಕ್ಕೆ ಒಂದೇ ವಾಹನ ಚಲಿಸುವಷ್ಟು ಮಾತ್ರವೇ ಜಾಗವಿದೆ. ಬಸ್, ಲಾರಿ, ಕಾರುಗಳು ಎದುರು ಬದುರಾದರೆ ಹಿಂದಿ ಮುಂದೆ ಸರ್ಕಸ್ ಮಾಡಿ ಸೈಡ್ ನೀಡಬೇಕಾದ ಅನಿವಾರ್ಯತೆ ಇದೆ. ತಿರುವು ಮುರುವು ರಸ್ತೆಯಾಗಿರುವ ಕಾರಣ ಅಪಾಯವೇ ಅಧಿಕ.
ಪ್ರತಿನಿತ್ಯ ನೂರಾರು ವಾಹನಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರಸ್ತೆಯ ಈ ದುಸ್ಥಿತಿಯಿಂದಾಗಿ ಯಾವುದೇ ಕ್ಷಣದಲ್ಲಾದರೂ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸುವ ಭೀತಿ ಎದುರಾಗಿದೆ.
ರಸ್ತೆಯ ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮುಂದಾದರೂ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು, ಸೇತುವೆಯನ್ನು ವಿಸ್ತರಿಸಿ ದುರಸ್ತಿ ಮಾಡಬೇಕು ಹಾಗೂ ತಕ್ಷಣವೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.