ಮಂಗಳೂರು: 2018ರಲ್ಲಿ ಮಂಗಳೂರು ಹೊರವಲಯದ ಪಣಂಬೂರು ಸಮೀಪದ ತೋಟ ಬೆಂಗ್ರೆ ಬೀಚ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಘಟನೆ ನಡೆದು ಎಂಟು ವರ್ಷಗಳ ನ್ಯಾಯಾಂಗ ಪ್ರಕ್ರಿಯೆಯ ಬಳಿಕ ಈ ತೀರ್ಪು ಹೊರಬಿದ್ದಿದೆ.

ಶಿಕ್ಷೆಗೊಳಗಾದ ಅಪರಾಧಿಗಳು
ಪ್ರಕರಣದ ವಿವರ
ನವೆಂಬರ್ 18, 2018 ರಂದು, ಮಹಿಳೆಯೊಬ್ಬರು ತನ್ನ ಪುರುಷ ಸ್ನೇಹಿತನೊಂದಿಗೆ ತೋಟಾ ಬೆಂಗ್ರೆಗೆ ಭೇಟಿ ನೀಡಿದರು. ತೋಟಾ ಬೆಂಗ್ರೆ ನಿವಾಸಿಗಳು ಮತ್ತು ವೃತ್ತಿಯಲ್ಲಿ ಮೀನುಗಾರರಾದ ಪ್ರಜ್ವಲ್ (33),
ಅರುಣ್ ಅಮೀನ್ (34), ಆದಿತ್ಯ ಸಾಲಿಯನ್ (28) ಮತ್ತು ಅಬ್ದುಲ್ ರಿಯಾಜ್ (40) ಎಂಬ ನಾಲ್ವರು ಪುರುಷರು ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಬೀಚ್‌ಗೆ ಬಂದಿದ್ದ ಮಹಿಳೆಯ ಪುರುಷ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಈ ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಈ ಭಯದಿಂದ ಆಕೆ ಘಟನೆ ನಡೆದು ಎರಡು ದಿನ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಇದಾದ ನಂತರ ಮತ್ತೆ ಅದೇ ಆರೋಪಿಗಳು ಮತ್ತೆ ಬರುವಂತೆ ಸೂಚಿಸಿದ್ದರು.
ಈ ವೇಳೆ ಯುವತಿಯು ಹೆತ್ತವರಿಗೆ ತಿಳಿಸಿದ್ದು, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 7 ಮಂದಿ ಆರೋಪಿಗಳಿದ್ದು, ಮೂವರು ವಯಸ್ಕರು ಸೇರಿ ನಾಲ್ವರು ಕಾನೂನು ಸಂಘರ್ಷಕ್ಕೊಳಗಾದವರಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆಯನ್ನು ಅಂದಿನ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಕಲಾವತಿ ಅವರು ಕೈಗೊಂಡಿದ್ದರು.
ನಂತರ ಅಂದಿನ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಮಂಜುನಾಥ ಶೆಟ್ಟಿ ಅವರು ತನಿಖೆಯನ್ನು ಮುಂದುವರಿಸಿದ್ದರು.
ಬಳಿಕ ಶ್ರೀನಿವಾಸ ಗೌಡ, ಐಪಿಎಸ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವು ಸ್ಪೆಷಲ್ ಕೇಸ್ ನಂ. 31/2019 ರಂತೆ ವಿಚಾರಣೆಗೆ ಒಳಪಟ್ಟಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
2026ರ ಜು.27 ರಂದು ಮಾನ್ಯ ನ್ಯಾಯಾಲಯವು ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 341, 323, 354, 376(ಡಿ), 506 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಕಲಂ 3(1)(w)(i) ಮತ್ತು 3(2)(v)(va) ಅಡಿಯಲ್ಲಿ ಆರೋಪಗಳು ಸಾಬೀತಾಗಿರುವುದಾಗಿ ತೀರ್ಪು ನೀಡಿತ್ತು.
ಇದಲ್ಲದೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ವತಿಯಿಂದ ನೊಂದ ಯುವತಿಗೆ ₹60,000/- ಪರಿಹಾರ ಮಂಜೂರು ಮಾಡಲಾಗಿದೆ.
ಆರೋಪಿಗಳಿಗೆ ಶಿಕ್ಷೆ ವಿವರ
• ಕಲಂ 376(ಡಿ) ಐಪಿಸಿ ಅಡಿಯಲ್ಲಿ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000/- ದಂಡ.
• ಕಲಂ 354 ಐಪಿಸಿ ಅಡಿಯಲ್ಲಿ ತಲಾ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000/- ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 1 ತಿಂಗಳ ಕಾರಾಗೃಹ ಶಿಕ್ಷೆ.
• ಕಲಂ 506 ಐಪಿಸಿ ಅಡಿಯಲ್ಲಿ ತಲಾ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹2,000/- ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 15 ದಿನಗಳ ಕಾರಾಗೃಹ ಶಿಕ್ಷೆ.
• ಕಲಂ 323 ಐಪಿಸಿ ಅಡಿಯಲ್ಲಿ ತಲಾ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹1,000/- ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 15 ದಿನಗಳ ಕಾರಾಗೃಹ ಶಿಕ್ಷೆ.
• ಕಲಂ 341 ಐಪಿಸಿ ಅಡಿಯಲ್ಲಿ ತಲಾ ₹500/- ದಂಡ.
