canaratvnews

ಪದುವಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಉತ್ಕರ್ಷ–2026’

ಮಂಗಳೂರು: ಪದುವಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಹೊಸದಾಗಿ ದಾಖಲಾದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಉತ್ಕರ್ಷ–2026’ ಪರಿಚಯಾತ್ಮಕ ಕಾರ್ಯಕ್ರಮವು ಕಾಲೇಜು ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಐಸಿಎಫ್ ಸಿಸಿಇ ಪ್ರಮಾಣೀಕೃತ ತರಬೇತುದಾರ, ಅಕ್ಷಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕ ಹಾಗೂ ಅಭಿಜ್ಞಾ ಎಜುಕೇಶನ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಭಿಲಾಷ್ ಕ್ಷತ್ರಿಯ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು,

“ಇಂದಿನ ಜನರೇಷನ್ ಜಡ್ (Gen Z) ವಿದ್ಯಾರ್ಥಿಗಳು ಕೇವಲ ಅಕಾಡೆಮಿಕ್ ಶಿಕ್ಷಣಕ್ಕೆ ಸೀಮಿತವಾಗಬಾರದು. ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಮೃದು ಕೌಶಲ್ಯಗಳು (Soft Skills) ಮತ್ತು ಪ್ರಾಯೋಗಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದುವಾ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾದರ್ ಅರುಣ್ ವಿಲ್ಸನ್ ಲೋಬೋ ಅವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಹಾಗೂ ಗುರು-ಹಿರಿಯರಿಗೆ ಗೌರವ ನೀಡುವುದು ಅತ್ಯಂತ ಮುಖ್ಯ. ನಮ್ಮ ಕಾಲೇಜು ಮಾದಕ ದ್ರವ್ಯ ಮುಕ್ತ (Drug-free) ಕ್ಯಾಂಪಸ್ ಆಗಿದ್ದು, ವಿದ್ಯಾರ್ಥಿಗಳು ಇಲ್ಲಿ ಉತ್ತಮ ಮೌಲ್ಯಗಳನ್ನು ಕಲಿತು ಸತ್ಪ್ರಜೆಗಳಾಗಬೇಕು” ಎಂದು ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀ ರೋಷನ್ ವಿನ್ಸಿ ಸ್ಯಾಂತುಮಾಯೋರ್ ಅವರು ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಸರ್ಟಿಫಿಕೇಟ್ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮ ಸಂಯೋಜಕರಾದ ಸುಶ್ರೀ ಜೀನಾ ಕರ್ನೇಲಿಯೋ ಅವರು ಅತಿಥಿಗಳನ್ನು ಸ್ವಾಗತಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥರಾದ ಸುಶ್ರೀ ಜೆಸ್ಲಿನ್ ಡಿಸೋಜಾ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀ ಲೆಸ್ಟರ್ ಕುಟಿನ್ಹೋ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ. ಸಂತೋಷ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ಪ್ರಥಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share News
Exit mobile version