ಪುತ್ತೂರು: ಜುಲೈ ,08 : ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯರು ಹಾಗೂ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿರಂಜನ್ ರೈ ಮಠಂತಬೆಟ್ಟು ಅವರ ಆಕಸ್ಮಿಕ ಹೃದಯಾಘಾತದ ನಿಧನಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ತೀವ್ರ ದುಃಖ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.


ಮೃತರ ನಿವಾಸಕ್ಕೆ ಭೇಟಿ ನೀಡಿದ ರಮಾನಾಥ ರೈ ಅವರು, ನಿರಂಜನ ರೈ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ. ರಮಾನಾಥ ರೈ, “ನಿರಂಜನ ರೈ ಮಠಂತಬೆಟ್ಟು ಅವರು ಸದಾ ಸಮಾಜಮುಖಿ ಮತ್ತು ಜನಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರು. ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಹಾಗೂ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಅವರ ಅಕಾಲಿಕ ಅಗಲಿಕೆ ಸಾರ್ವಜನಿಕ ಬದುಕಿಗೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ,” ಎಂದು ಕಂಬನಿ ಮಿಡಿದರು.

ಅಂತಿಮ ದರ್ಶನದ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಗಣ್ಯರು ಉಪಸ್ಥಿತರಿದ್ದು, ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಿದರು.


