ಮೂಡಬಿದ್ರೆ: ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಜುಲೈ 5 ರವಿವಾರದಂದು ಬೆಳಗ್ಗಿನ ಪವಿತ್ರ ಬಲಿಪೂಜೆಯ ನಂತರ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ ಒಂಬತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಚರ್ಚಿನ ಧರ್ಮಗುರುಗಳಾದ ವಂದನೀಯ ಲಿಯೋ ವಿಲಿಯಂ ಲೋಬೊ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, “ವಿದ್ಯಾರ್ಥಿಗಳು ನಿರಂತರ ಶ್ರಮ ಮತ್ತು ಶಿಸ್ತಿನಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ಯುವ ಪ್ರತಿಭೆಗಳು ಸಮಾಜದ ಆಸ್ತಿಯಾಗಿದ್ದು, ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಹರಸಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ (S.S.L.C), ದ್ವಿತೀಯ ಪಿಯುಸಿ ಮತ್ತು ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಾಧಕ ವಿದ್ಯಾರ್ಥಿಗಳಾದ ರಿಯೋಲಿನ್ ಸಲೋಮಿ ಡಿಸೋಜಾ, ರಿಶಾ ಡಿಸೋಜಾ, ಮರಿಶಾ ಸೆರಾವೊ, ಜೇನ್ ಕಾರ್ಡೊಜಾ, ಜೆನಿಟಾ ತಾವ್ರೊ, ಲಿಯೋನಾ ಡಿಸೋಜಾ, ಆಶೆಲ್ ಲವಿಟಾ ಡಿಸಿಲ್ವ, ಆನ್ಯಾ ಡಿಸೋಜಾ ಮತ್ತು ಜೋಶ್ವಾ ಡಿಸೋಜಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಶ್ರೀಮತಿ ಪ್ರಿಮಾ ಕೊರೆಯಾ, ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷರಾದ ಶ್ರೀಮತಿ ಸರಿತ ತಾವ್ರೊ, ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕಿಶೋರ್ ಡಿಸೋಜಾ ಉಪಸ್ಥಿತರಿದ್ದರು.

ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಕಾರ್ಯದರ್ಶಿ ಶ್ರೀ ಜೀವನ್ ಕ್ರಾಸ್ತಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.




