DAKSHINA KANNADALATEST NEWS

ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’: ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಬೃಹತ್ ಪಾದಯಾತ್ರೆ

ಮಂಗಳೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಸ್ಥಳೀಯ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಧೋರಣೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಬೃಹತ್ ಪಾದಯಾತ್ರೆ ಹಾಗೂ ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಹಾಗೂ ಹೋರಾಟದ ಸಂಚಾಲಕ ಶ್ರೀ ಕಿಶೋರ್ ಕುಮಾರ್ ಪುತ್ತೂರು ಮನವಿ ಮಾಡಿದ್ದಾರೆ.


ಮಂಗಳೂರಿನಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

• ಅನುದಾನ ಕಡಿತ ಮತ್ತು ಸಿಬ್ಬಂದಿ ಕೊರತೆ: ಗ್ರಾಮ ಪಂಚಾಯತಿಗಳು ತೀವ್ರ ಅನುದಾನದ ಕೊರತೆ ಎದುರಿಸುತ್ತಿವೆ. 2024 ರಲ್ಲಿ ಪ್ರಾರಂಭಿಸಲಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ನೇಮಕಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ.

• ತಂತ್ರಾಂಶಗಳ ಸರ್ವರ್ ಸಮಸ್ಯೆ: ಇ-ಸ್ವತ್ತು ಮತ್ತು ಪಂಚತಂತ್ರ ತಂತ್ರಾಂಶಗಳ ನಿರಂತರ ಸರ್ವರ್ ದೋಷದಿಂದಾಗಿ ಸಾರ್ವಜನಿಕರು ಆಸ್ತಿ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ನಗರ ಪ್ರದೇಶಗಳಲ್ಲೂ ಕಟ್ಟಡ ಪರವಾನಗಿಯ LBPAS ತಂತ್ರಾಂಶದ ದೋಷದಿಂದ ಅರ್ಜಿಗಳು ಬಾಕಿ ಉಳಿದಿವೆ.

• ಬಡವರ ಸೂರು ಕಸಿದ ಸರ್ಕಾರ: ಕಳೆದ ಮೂರು ವರ್ಷಗಳಿಂದ ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಗಳಡಿ ಮನೆಗಳನ್ನು ಮಂಜೂರು ಮಾಡದೆ ಬಡವರಿಗೆ ಅನ್ಯಾಯ ಮಾಡಲಾಗಿದೆ. ನಿವೇಶನ ಮತ್ತು ಕಟ್ಟಡ ನಕ್ಷೆ ಅನುಮೋದನೆ ಅಧಿಕಾರವನ್ನು ಪುನಃ ಗ್ರಾಮ ಪಂಚಾಯತಿಗಳಿಗೇ ನೀಡಬೇಕು.

• ಬಜೆಟ್ ಘೋಷಣೆಗಳು ಕಾಗದಕ್ಕಷ್ಟೇ ಸೀಮಿತ: 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಪ್ರಗತಿಪಥ ರಸ್ತೆ ಅಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯತಿ ದತ್ತು ಯೋಜನೆಗಳು ಇಂದಿಗೂ ಅನುಷ್ಠಾನಗೊಂಡಿಲ್ಲ.

• ಗೃಹಲಕ್ಷ್ಮಿ, ಪಿಂಚಣಿ ವಿಳಂಬ: ಗೃಹಲಕ್ಷ್ಮಿ ಯೋಜನೆಯ ಸಹಾಯಧನ, ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನದ ಮಾಸಾಶನಗಳು ಕಳೆದ ಆರು ತಿಂಗಳಿಂದ ಬಿಡುಗಡೆಯಾಗದೆ ಮಹಿಳೆಯರು ಹಾಗೂ ಹಿರಿಯ ನಾಗರಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

• ಚುನಾವಣೆ ನಡೆಸಲು ಮೀನಾಮೇಷ: ಅಧಿಕಾರ ವಿಕೇಂದ್ರೀಕರಣವನ್ನು ಹತ್ತಿಕ್ಕುತ್ತಿರುವ ಸರ್ಕಾರ, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸದೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿದೆ.

“ಈ ಹೋರಾಟವು ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧವಾದುದಲ್ಲ. ಇದು ಜನರ ಹಕ್ಕುಗಳನ್ನು ರಕ್ಷಿಸುವ ಮತ್ತು ಸರ್ಕಾರವನ್ನು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸುವ ಜನಪರ ಹೋರಾಟವಾಗಿದೆ,” ಎಂದು ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ. ನಾಳೆಯಿಂದ ಜಿಲ್ಲಾದ್ಯಂತ ಆರಂಭವಾಗಲಿರುವ ಈ ಬೃಹತ್ ಪಾದಯಾತ್ರೆಯಲ್ಲಿ ಸಾರ್ವಜನಿಕರು, ಮಹಿಳೆಯರು, ಯುವಕರು, ಕಾರ್ಮಿಕರು ಹಾಗೂ ಸ್ಥಳೀಯ ಸಂಸ್ಥೆಗಳ ಮಾಜಿ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಅವರು ವಿನಂತಿಸಿದ್ದಾರೆ.

Share News