canaratvnews

ಮೈಸೂರು ದಸರಾದಲ್ಲಿ ಕಂಬಳ ಸಂಭ್ರಮ: ಅಕ್ಟೋಬರ್ 18, 19 ರಂದು ಐತಿಹಾಸಿಕ ಕ್ರೀಡೆಗೆ ಮುಹೂರ್ತ ನಿಗದಿ

ಮೈಸೂರು : ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಅದ್ಧೂರಿ ಕಂಬಳ ಕ್ರೀಡೆಯನ್ನು ಆಯೋಜಿಸಲು ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಅಕ್ಟೋಬರ್ 18 ಮತ್ತು 19 ರಂದು (ಭಾನುವಾರ ಮತ್ತು ಸೋಮವಾರ) ಎರಡು ದಿನಗಳ ಕಾಲ ಮೈಸೂರಿನಲ್ಲಿ ಕಂಬಳ ಜರುಗಲಿದೆ ಎಂದು ಕಂಬಳದ ರುವಾರಿ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಬಳಿ ಕಂಬಳದ ಕೆರೆ : ಕಂಬಳ ಆಯೋಜನೆಗಾಗಿ ಮೈಸೂರಿನಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಬಳಿಯ ಸುಮಾರು 20 ಎಕರೆ ವಿಸ್ತೀರ್ಣದ ಜಾಗವನ್ನು ಗುರುತಿಸಲಾಗಿದೆ. ಪರಿಶೀಲಿಸಲಾದ ಎರಡು ಸ್ಥಳಗಳ ಪೈಕಿ, ಸುಸಜ್ಜಿತ ಸಾರಿಗೆ ಮತ್ತು ವಿಸ್ತಾರವಾದ ವಿಸ್ತೀರ್ಣ ಹೊಂದಿರುವ ಈ 20 ಎಕರೆ ಜಾಗವೇ ಕಂಬಳಕ್ಕೆ ಅತ್ಯಂತ ಸೂಕ್ತ ಎಂದು ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

150 ಜೋಡಿ ಕೋಣಗಳ ಭಾಗವಹಿಸುವಿಕೆ: ಜುಲೈ 15 ರೊಳಗೆ ಭೂಮಿ ಪೂಜೆ:ಈ ಬಾರಿಯ ದಸರಾ ಕಂಬಳದಲ್ಲಿ ಕರಾವಳಿ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 150 ಜೋಡಿ ವೇಗದ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಕಂಬಳದ ಸಿದ್ಧತೆಗಳಿಗಾಗಿ ಜುಲೈ 15 ರೊಳಗಾಗಿ ಕಂಬಳದ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಗಳ ಸಭೆಯಲ್ಲಿ ಅಂತಿಮ ರೂಪುರೇಶೆ: ಶುಕ್ರವಾರ ನಡೆದ ಪ್ರಥಮ ಸಭೆಯಲ್ಲಿ ಕಂಬಳ ಸಮಿತಿಯ ಪ್ರಮುಖರು ಹಾಗೂ ಪ್ರಮುಖ ಅಧಿಕಾರಿಗಳು ಭಾಗವಹಿಸಿ, ಪ್ರಾಥಮಿಕವಾಗಿ ದಿನಾಂಕ ಮತ್ತು ಸ್ಥಳವನ್ನು ಮಾತ್ರ ನಿಗದಿಪಡಿಸಿದ್ದಾರೆ. ಉಳಿದಂತೆ ಕಂಬಳದ ಸಂಪೂರ್ಣ ರೂಪುರೇಶೆಗಳು, ಪ್ರಶಸ್ತಿ ಮೊತ್ತ ಹಾಗೂ ಇತರ ನಿಯಮಾವಳಿಗಳ ಕುರಿತು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

Share News
Exit mobile version