canaratvnews

*ರೈತರಿಂದಲೇ ಮುಂಗಾರು ಬೆಳೆ ಸಮೀಕ್ಷೆ*

ಮಂಗಳೂರು: 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದ್ದು, ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ತಾವೇ ಖುದ್ದಾಗಿ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ-2026-27” ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇಲಾಖೆಯ ಫ್ರೂಟ್ಸ್ (FRUITS) ತಂತ್ರಾಂಶದ ಎಫ್.ಐ.ಡಿ (FID) ಸಂಖ್ಯೆ ಮತ್ತು ಆಧಾರ್ ಇ-ಕೆವೈಸಿ (OTP) ಬಳಸಿ ಮೊಬೈಲ್‌ನಲ್ಲಿ ಲಾಗಿನ್ ಆಗಬೇಕು. ನಂತರ ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್ ಮತ್ತು ವಿಸ್ತೀರ್ಣವನ್ನು ಆಯ್ಕೆ ಮಾಡಿ, ಜಮೀನಿನ ಗಡಿ ರೇಖೆಯೊಳಗೆ ನಿಂತು ಬೆಳೆಯ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.

ಎಫ್.ಐ.ಡಿ ಸಂಖ್ಯೆ ಇಲ್ಲದ ರೈತರು ಹತ್ತಿರದ ಕೃಷಿ, ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಎಫ್.ಐ.ಡಿ ಮಾಡಿಸಿಕೊಳ್ಳಬಹುದು. ಈ ಸಮೀಕ್ಷೆಯ ಮಾಹಿತಿಯನ್ನು ಪ್ರಕೃತಿ ವಿಕೋಪ ಪರಿಹಾರ ವಿತರಣೆ, ಬೆಳೆ ವಿಮೆ ಯೋಜನೆ, ವಿವಿಧ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಮತ್ತು ರೈತರ ಪಹಣಿ (RTC) ಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುತ್ತದೆ. ಹೀಗಾಗಿ ಜಿಲ್ಲೆಯ ರೈತರು ಯಾವುದೇ ಲೋಪದೋಷಗಳಿಲ್ಲದೆ ನಿಗದಿತ ಅವಧಿಯೊಳಗೆ ನಿಖರ ಮಾಹಿತಿಯನ್ನು ದಾಖಲಿಸಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.

Share News
Exit mobile version