LATEST NEWS

ಜಪ್ಪಿನಮೊಗರು ಎರಡು ಕೆರೆಗಳ ಅಭಿವೃದ್ಧಿಗೆ ಮೂಡ ವತಿಯಿಂದ ಶಿಲಾನ್ಯಾಸ; ಸ್ಥಳೀಯರ ಸಮಿತಿ ರಚಿಸಲು ಸಂತೋಷ್ ಕುಮಾರ್ ಶೆಟ್ಟಿ ಕರೆ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ವತಿಯಿಂದ ಜಪ್ಪಿನಮೊಗರು ಪರಿಸರದ ಸರ್ವೆ ನಂಬರ್ 69/2 ಹಾಗೂ 59/9ರಲ್ಲಿ ಕೈಗೆತ್ತಿಕೊಳ್ಳಲಿರುವ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಮಂಗಳೂರು: ಜಲಮೂಲಗಳ ಸಂರಕ್ಷಣೆ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ಮಹತ್ವದ ಹೆಜ್ಜೆ ಇಟ್ಟಿದ್ದು, ಜಪ್ಪಿನಮೊಗರು ಪರಿಸರದ ಎರಡು ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು.

ಜಪ್ಪಿನಮೊಗರು ವ್ಯಾಪ್ತಿಯ ಸರ್ವೆ ನಂಬರ್ 69/2 ಹಾಗೂ 59/9ರ ಎರಡು ಪ್ರದೇಶಗಳಲ್ಲಿ ಮೂಡ ವತಿಯಿಂದ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಸ್ಥಳೀಯರ ಸಹಭಾಗಿತ್ವಕ್ಕೆ ಕರೆ

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು, “ಕೆರೆಗಳ ಅಭಿವೃದ್ಧಿಯಿಂದ ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅದರ ಸಮರ್ಪಕ ನಿರ್ವಹಣೆ ಹಾಗೂ ನಿರಂತರ ಮೇಲ್ವಿಚಾರಣೆ ಅತ್ಯಗತ್ಯ. ಆದ್ದರಿಂದ ಸ್ಥಳೀಯ ನಾಗರಿಕರು ಹಾಗೂ ಸಂಘ-ಸಂಸ್ಥೆಗಳು ಸೇರಿಕೊಂಡು ಒಂದು ಸಮಿತಿಯನ್ನು ರಚಿಸಿಕೊಂಡು, ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮೂಡ ಆಯುಕ್ತ ಮೊಹಮ್ಮದ್ ನಝೀರ್, ಮೂಡ ಸದಸ್ಯರಾದ ನೀರಜ್ ಚಂದ್ರ ಪಾಲ್, ಸಬಿತಾ ಮಿಸ್ಕಿತ್ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

Share News