LATEST NEWS

ಬಿಜೆಪಿ ಕಾರ್ಯಕರ್ತರನ್ನು ಬೆದರಿಸಿದರೆ ಪಕ್ಷ ಸುಮ್ಮನೆ ಕೂರಲ್ಲ : ಸಂಸದ ಕ್ಯಾ. ಬ್ರಿಜೇಶ್ ಚೌಟ ಎಚ್ಚರಿಕೆ

ಮಂಗಳೂರು:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SSR) ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಬೂತ್ ಮಟ್ಟದ ಏಜೆಂಟರಿಗೆ (BLA) ಪೊಲೀಸರು ಕಿರುಕುಳ ನೀಡಬಾರದು. ಅವರು ಯಾವುದೇ ಆತಂಕವಿಲ್ಲದೆ ಕರ್ತವ್ಯ ನಿರ್ವಹಿಸಲು ಮುಕ್ತ ಅವಕಾಶ ನೀಡಬೇಕು. ಒಂದು ವೇಳೆ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಯತ್ನ ಮುಂದುವರಿದರೆ ಪಕ್ಷವು ಸುಮ್ಮನೆ ಕೂರುವುದಿಲ್ಲ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಾಂವಿಧಾನಿಕ ಪ್ರಕ್ರಿಯೆಗೆ ಸರ್ಕಾರದ ಅಡ್ಡಿ:

“ಮತದಾರರ ಪಟ್ಟಿ ಪರಿಷ್ಕರಣೆಯು (SSR) ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕುವುದು, ವಾಸಸ್ಥಳ ಬದಲಾಯಿಸಿದವರ ವಿವರ ತಿದ್ದುಪಡಿ ಹಾಗೂ ನಕಲಿ ದಾಖಲಾತಿಗಳನ್ನು ಪತ್ತೆ ಹಚ್ಚುವ ನಿಯಮಿತ ಹಾಗೂ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣದ ಪ್ರಮುಖ ಭಾಗ. ಈ ಪ್ರಕ್ರಿಯೆಗೆ ನೆರವಾಗಲು ರಾಜಕೀಯ ಪಕ್ಷಗಳಿಗೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಚುನಾವಣಾ ಆಯೋಗವೇ ಕಾನೂನುಬದ್ಧ ಅವಕಾಶ ನೀಡಿದೆ. ಆದರೆ, ರಾಜ್ಯ ಸರ್ಕಾರವು ನಮ್ಮ ಏಜೆಂಟರನ್ನು ಪೊಲೀಸರ ಮೂಲಕ ಬೆದರಿಸಲು ಯತ್ನಿಸುತ್ತಿದೆ,” ಎಂದು ಚೌಟ ಆರೋಪಿಸಿದರು.

ಕಾಂಗ್ರೆಸ್‌ಗೆ ಸಂಸದರ ಸವಾಲು:

ನಮೂನೆ 7ರ ಅಡಿ ಅರ್ಜಿ ಸಲ್ಲಿಸಿದ ತಕ್ಷಣ ಮತದಾರರ ಹೆಸರು ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಅದು ಕೇವಲ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯಾಗಿದ್ದು, ಮತದಾರರ ನೋಂದಣಾಧಿ ಕಾರಿಗಳು ಪರಿಶೀಲಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಆದರೂ ಕಾಂಗ್ರೆಸ್ ಪಕ್ಷವು ‘ಅರ್ಹ ಮತದಾರರ ಹೆಸರುಗಳನ್ನು ಕಾನೂನು ಬಾಹಿರವಾಗಿ ತೆಗೆದುಹಾಕಲಾಗುತ್ತಿದೆ’ ಎಂದು ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ.

“ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವ ಬದಲು, ಕಾನೂನುಬಾಹಿರವಾಗಿ ಮತದಾನದ ಹಕ್ಕು ಕಳೆದುಕೊಂಡಿರುವ ಒಬ್ಬನೇ ಒಬ್ಬ ವ್ಯಕ್ತಿಯನ್ನಾದರೂ ಚುನಾವಣಾ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಸಾಕ್ಷ್ಯ ನೀಡಲಿ,” ಎಂದು ಕಾಂಗ್ರೆಸ್ ನಾಯಕರಿಗೆ ಸಂಸದರು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷವು ಸಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ಮೂಡಿಸಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ. ಸಂವಿಧಾನವನ್ನು ತನ್ನ ರಾಜಕೀಯ ನಾಟಕಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದೇಶದ ಪ್ರತಿಯೊಂದು ಸಮಸ್ಯೆಗೆ ಕೋಮು ಬಣ್ಣ ಬಳಿಯುತ್ತಿದೆ. ಒಂದು ವೇಳೆ ಪರಿಷ್ಕರಣೆ ವೇಳೆ ಅರ್ಹ ಮತದಾರರ ಹೆಸರು ಆಕಸ್ಮಿಕವಾಗಿ ಕೈಬಿಟ್ಟು ಹೋಗಿದ್ದರೂ, ಅವರು ನಮೂನೆ 6ರ ಅಡಿ ಮರು ಅರ್ಜಿ ಸಲ್ಲಿಸಲು ಅವಕಾಶವಿದೆ. ಹೀಗಿದ್ದರೂ ಕಾಂಗ್ರೆಸ್ ಏಕೆ ಹೆದರುತ್ತಿದೆ ಎಂದು ಅವರು ಪ್ರಶ್ನಿಸಿದರು.

ಬ್ರಹ್ಮರಕೂಟ್ಟು ಟೋಲ್ ಪ್ಲಾಜಾ ಶೀಘ್ರವೇ ತೆರವು

ಇದೇ ಸಂದರ್ಭದಲ್ಲಿ ಜಿಲ್ಲೆಯ ಹೆದ್ದಾರಿ ಸವಾರರಿಗೆ ಸಂಸದರು ಪ್ರಮುಖ ಆಶ್ವಾಸನೆಯೊಂದನ್ನು ನೀಡಿದರು. ಬಿ.ಸಿ.ರೋಡ್-ಶಿರಾಡಿ ನಡುವೆ ಹಾಗೂ ಪುಂಜಾಲಕಟ್ಟೆಯಲ್ಲಿ ಹೊಸ ಟೋಲ್ ಕಾರ್ಯಾ ಚರಣೆ ಪೂರ್ಣ ಪ್ರಮಾಣದಲ್ಲಿ ಆರಂಭವಾದ ತಕ್ಷಣ, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸದ್ಯದ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ಪ್ರಕಟಿಸಿದರು. ಈ ಕುರಿತು ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲಾಗಿದ್ದು, ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖ ಮುಖಂಡರಾದ ಸುಜಿತ್ ಪ್ರತಾಪ್, ಪೂಜಾ ಪೈ, ಸಂಜಯ ಪ್ರಭು, ರಾಜಗೋಪಾಲ ರೈ, ಪೂರ್ಣಿಮಾ ಎಂ., ಜೀವನ್ ಹಾಗೂ ವಸಂತ ಪೂಜಾರಿ ಉಪಸ್ಥಿತರಿದ್ದರು.

Share News