• Home  
  • ಸೋಮೇಶ್ವರದ ಕಡಲಕಿನಾರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯ “ಯೋಗ ವಿತ್ ಯೋಧ”  ಅಂತಾರಾಷ್ಟ್ರೀಯ ಯೋಗ ದಿನಾಚರಣೆ
- DAKSHINA KANNADA

ಸೋಮೇಶ್ವರದ ಕಡಲಕಿನಾರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯ “ಯೋಗ ವಿತ್ ಯೋಧ”  ಅಂತಾರಾಷ್ಟ್ರೀಯ ಯೋಗ ದಿನಾಚರಣೆ


ಮಂಗಳೂರು: ದಕ್ಷಿಣ ಕನ್ನಡದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಸೋಮೇಶ್ವರದ ಕಡಲಕಿನಾರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯ “ಯೋಗ ವಿತ್ ಯೋಧ” 2ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಆ ಮೂಲಕ ಸಮುದ್ರದ ತೆರೆಯಬ್ಬರದ ನಡುವೆ ಪ್ರಕೃತಿ ಹಾಗೂ ದೈವಿಕತೆಯ ಮಡಿಲಲ್ಲಿ ಮನಸ್ಸನ್ನು ಶಾಂತಗೊಳಿಸಿ ದೇಹವನ್ನು ಹತೋಟಿಯಲ್ಲಿಡುವ ಯೋಗಾಭ್ಯಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. 


ಸಸಿಹಿತ್ಲು ಬೀಚ್ ನಲ್ಲಿ ಕಳೆದ ವರ್ಷ ಕ್ಯಾ. ಚೌಟ ನೇತೃತ್ವದಲ್ಲಿ ಮೊದಲ ಆವೃತ್ತಿಯ ʼಯೋಗ ವಿತ್ ಯೋಧʼ ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ಈ ಹಿನ್ನಲೆಯಲ್ಲಿ ಕರಾವಳಿಯ ಪ್ರಸಿದ್ಧ ಧಾರ್ಮಿಕ ಹಾಗೂ ಸೊಬಗಿನ ತಾಣವಾಗಿರುವ ಸೋಮೇಶ್ವರದ ಪ್ರಶಾಂತ ವಾತಾವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಯೋಗ ಪ್ರದರ್ಶನಕ್ಕೆ ಯೋಗಾಸಕ್ತರನ್ನು ಆಹ್ವಾನಿಸಲಾಗಿತ್ತು. 

ಯೋಗಾಭ್ಯಾಸದ ಬಳಿಕ ಮಾತನಾಡಿದ ಸಂಸದ ಕ್ಯಾ. ಚೌಟ ಅವರು ಕೂಡ ನಮ್ಮ ಪ್ರಾಚೀನ ಪರಂಪರೆಯ ಯೋಗದ ಶ್ರೀಮಂತಿಕೆ ಮಹತ್ವವನ್ನು ತಿಳಿಹೇಳುವ ಪ್ರಯತ್ನದ ಜೊತೆಗೆ, ‘ಯೋಗ ಎಂದರೆ ಅದು ಕೇವಲ ದೇಹವನ್ನು ದಂಡಿಸುವುದಲ್ಲ; ಜತೆಗೆ ಮನಸ್ಸನ್ನು ಪಳಗಿಸುವುದು ಹಾಗೂ ಇಚ್ಛಾಶಕ್ತಿಯನ್ನು ಬೆಳೆಸುವುದು. ಕೇವಲ ಒಂದು ಆಸನವನ್ನು ಬಹಳ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದಲೂ ನಮ್ಮೊಳಗೇ ಬದಲಾವಣೆ ತರಬಹುದು. ಜನರು ಯೋಗದ ಬಗೆಗಿನ ಆಸಕ್ತಿ ಹಾಗೂ ಉತ್ಸಾಹವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಾರದಲ್ಲಿ ಒಂದು ದಿನ ಅಥವಾ ತಿಂಗಳಲ್ಲಿ ಒಮ್ಮೆ ನಾವೆಲ್ಲರೂ ಕುಟುಂಬದವರು, ಸ್ನೇಹಿತರ ಜತೆಗೆ ಈ ರೀತಿ ಕಡಲತಡಿಯಲ್ಲಿ ಯೋಗಾಭ್ಯಾಸ ಮಾಡಬಹುದೇ? ಒಂದು ವೇಳೆ ಇದು ಸಾಧ್ಯವಾಗುವುದಾದರೆ ಕುಡ್ಲಕ್ಕೆ ವಿಶಿಷ್ಟವಾದ ಸಂಪ್ರದಾಯವಾಗಬಹುದು ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.


ಸೋಮೇಶ್ವರವನ್ನು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಪಡಿಸುವ ಮೂಲಕ, ಅದರ ನೈಜ ಸ್ವರೂಪಕ್ಕೆ ಧಕ್ಕೆಯಾಗದಂತೆ ‘ವಿಕಾಸ ಭಿ, ವಿರಾಸತ್ ಭಿ’ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರೀಕ್ಷೆಯನ್ನು ಸಾಕಾರಗೊಳಿಸಬೇಕೆಂದು ಕ್ಯಾ. ಚೌಟ ಕರೆ ನೀಡಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ, ಕರಾವಳಿಯ ಪ್ರವಾಸೋದ್ಯಮದ ತಾಣ ಹಾಗೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದರೊಂದಿಗೆ, ಸಾಧ್ಯತೆಗಳ ಸಾಗರವಾಗಿರುವ ದಕ್ಷಿಣ ಕನ್ನಡವನ್ನು ಅಭಿವೃದ್ದಿಯ ಪಥದೆಡೆಗೆ ಬದಲಾಯಿಸುವ ಮಹತ್ವದ ಸಂಕಲ್ಪವನ್ನು ಕೈಗೊಳ್ಳಲಾಯಿತು.


ಇದೇ ವೇಳೆ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಸೋಮನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ  ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಯೋಗಾಭ್ಯಾಸವನ್ನು ಯೋಗ ತರಬೇತುದಾರರಾದ ಸಂಧ್ಯಾ ರೈ ನಡೆಸಿಕೊಟ್ಟಿದ್ದು, ಅರುಣ್ ಉಳ್ಳಾಲ ಯೋಗ ಮಂತ್ರ ಪಠಿಸಿದರು. ಆರ್. ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678