ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು’ ಸಂಚಿಕೆಯೊಂದರಲ್ಲಿ ಹಿಂದು ದೇವತೆಗಳನ್ನು ಅಪಹಾಸ್ಯ ಮಾಡಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ವಾಕ್ ಸ್ವಾತಂತ್ರ್ಯದ ನೆಪದಲ್ಲಿ ನೀವು ಏನಾದರೂ ಮಾಡಬಹುದೇ? ಎಂದು ಝೀ ವಾಹಿನಿ ಹಾಗೂ ಕಾರ್ಯಕ್ರಮದ ನಿರ್ದೇಶಕರನ್ನು ಕಟುವಾಗಿ ಪ್ರಶ್ನಿಸಿದೆ. ಇದೇ ವೇಳೆ ವಾಹಿನಿ, ಕಾರ್ಯಕ್ರಮದ ನಿರ್ದೇಶಕರು ಹಾಗೂ ಕಲಾವಿದರ ವಿರುದ್ಧ ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮ ಜರುಗಿಸದಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ.

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಜೀ ಎಂಟರ್‌ಪ್ರೈಸಸ್‌ನ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ. ಅನಿಲ್ ಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ದೂರು ಇನ್ನೂ ತನಿಖಾ ಹಂತದಲ್ಲಿದ್ದು, ಅರ್ಜಿದಾರರು ತನಿಖೆಯಲ್ಲಿ ಭಾಗವಹಿಸಬೇಕು. ತನಿಖೆಯ ನೆಪದಲ್ಲಿ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿತಲ್ಲದೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ (ಸುಬ್ರಹ್ಮಣ್ಯಪುರ ಪೊಲೀಸರು) ನೋಟಿಸ್ ಹಾಗೂ ದೂರುದಾರ ಪ್ರಶಾಂತ್ ಶಶಿಧರ ನರಗುಂದ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಪ್ರಸಾರಗೊಂಡ ಆಕ್ಷೇಪಾರ್ಹ ಹಾಸ್ಯದ ಸ್ಕಿಟ್ ಮಹಾಭಾರತದ ಒಂದು ಭಾಗವನ್ನು ಗ್ರಾಮೀಣ ಭಾಗದ ಜನ ನಾಟಕಕ್ಕಾಗಿ ಪೂರ್ವಾಭ್ಯಾಸ ಮಾಡುತ್ತಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ಯಾವುದೇ ದೇವತೆಗಳನ್ನು ಅವಹೇಳನ ಮಾಡುವ ಉದ್ದೇಶವಿರಲಿಲ್ಲ ಎಂದರು.ಆಗ ನ್ಯಾಯಪೀಠ, ವಾಕ್ ಸ್ವಾತಂತ್ರ್ಯದ ನೆಪದಲ್ಲಿ ನಿಮಗೆ ಅನಿಸಿದ್ದೆಲ್ಲವನ್ನೂ ಮಾಡಬಹುದೇ? ದೇವರು, ಪೌರಾಣಿಕ ವ್ಯಕ್ತಿಗಳನ್ನು ನಿಷ್ಪ್ರಯೋಜಕರು ಎನ್ನುವ ರೀತಿಯಲ್ಲಿ ಬಿಂಬಿಸುವವರಿಗೆ ಅನುಗ್ರಹ ತೋರುವ ಅಗತ್ಯವಿಲ್ಲ? ಅಂಥವರನ್ನು ಏಕೆ ಬಿಡಬೇಕು? ದೂರನ್ನು ಗಮನಿಸಿದ್ದೀರಾ? ಕೃಷ್ಣ ದೇವರನ್ನು ಏನೆಂದು ಬಿಂಬಿಸಲಾಗಿದೆ? ದೂರನ್ನು ಓದಿದ್ದೀರಾ, ಅದು ಓದುವ ರೀತಿಯಲ್ಲಿ ಇದೆಯೇ? ದ್ರೌಪದಿಯನ್ನು ಹೇಗೆ ಬಿಂಬಿಸಿಲಾಗಿದೆ? ಅದನ್ನು ಓದಲಾಗುತ್ತದೆಯೇ? ಹಾಸ್ಯದ ಹೆಸರಿನಲ್ಲಿ ಏನಾದರೂ ಈ ದೇಶದಲ್ಲಿ ನಡೆಯುತ್ತದೆ? ಈ ರೀತಿಯಲ್ಲಿ ವಾಕ್ ಸ್ವಾತಂತ್ರ್ಯ ಬಳಕೆ ಸರಿಯೇ? ದೂರನ್ನು ಓದಲಾಗದು, ಅದಾಗ್ಯೂ, ನಾವು ಅನುಕಂಪ ತೋರಬೇಕಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
ವಿಪರೀತ ಹಾಸ್ಯದಿಂದಲೇ ಸಮಸ್ಯೆ ಸೃಷ್ಟಿ
ಸಂದೇಶ ಚೌಟ ಅವರು, ಹಿಂದು ದೇವತೆಗಳ ಕುರಿತು ಜನರು ಪೂರ್ವಾಭ್ಯಾಸ ಮಾಡುವುದಕ್ಕೆ ಸಂಬಂಧಿಸಿದ ಎಪಿಸೋಡ್ ಅದಾಗಿದೆ. ಇದು ದೇವರುಗಳಿಗೆ ಸಂಬಂಧಿಸಿದ್ದಲ್ಲ ಎಂದರು. ಇದಕ್ಕೆ ನ್ಯಾಯಪೀಠ, ನ್ಯಾಯಾಲಯಗಳು ಹೆಚ್ಚು ಉದಾರವಾಗಿರುವುದರಿಂದ ಈ ಘಟನೆಗಳು ನಡೆಯುತ್ತಿವೆ. ನಾವು ಸ್ವಲ್ಪ ಕಠಿಣವಾದರೆ ಅದು ಬೇರೆಯದೇ ರೀತಿಯಲ್ಲಿರುತ್ತದೆ. ಕಾಮಿಡಿ ವಿಪರೀತವಾಗುತ್ತಿದೆ. ಇದೇ ಇಲ್ಲಿ ಸಮಸ್ಯೆಯಾಗುತ್ತಿರುವುದು. ಎಲ್ಲವನ್ನೂ ಒಂದೇ ರೀತಿಯಲ್ಲಿ ಕಾಣಲಾಗದು. ಎಲ್ಲವೂ ಇದೇ ರೀತಿ ಆದರೆ ಹಾಗೆ ಇರಲಿ ಬಿಡಿ. ಕಾಮಿಡಿ ಎನ್ನುವುದು ನಿಜ. ಆದರೆ, ಅದು ಇನ್ನೊಬ್ಬರಿಗೆ ಹೊರೆಯಾಗಬಾರದು ಎಂದಿತು. ಇದಕ್ಕೆ ಚೌಟ ಅವರು ಪೂರ್ವಾಭ್ಯಾಸವಷ್ಟೇ ಎಂದರು. ಆಗ ನ್ಯಾಯಪೀಠ, ಪೂರ್ವಭ್ಯಾಸವನ್ನು ಹಂಚಿಕೆ ಮಾಡಿದ್ದೇಕೆ? ಎಂದು ಪ್ರಶ್ನಿಸಿತು.
ಪ್ರಕರಣದ ಹಿನ್ನೆಲೆ
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಪ್ರಸಾರವಾದ ಹಾಸ್ಯದ ಸ್ಕಿಟ್‌ನ ಪಾತ್ರಧಾರಿಗಳು, ಸ್ಕ್ರಿಪ್ಟ್ ತಯಾರಿಸಿದವರು, ನಿರ್ದೇಶಕರು, ಕನ್ನಡ ವಾಹಿನಿ, ಜಿ5 ಒಟಿಟಿಯಲ್ಲಿ ಮಹಾಭಾರತದಲ್ಲಿನ ಪೂಜ್ಯರ ಪಾತ್ರಗಳನ್ನು ಹಿಂದು ಧರ್ಮದ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಿದ್ದಾರೆ. ಶ್ರೀ ಕೃಷ್ಣ, ಪಾಂಡವರು, ಧೃತರಾಷ್ಟ್ರನ ಪಾತ್ರಧಾರಿಗಳನ್ನು ಅವಾಚ್ಯ ಶಬ್ದದಿಂದ ನಿಂದಿಸಲಾಗಿದೆ. ಶ್ರೀಕೃಷ್ಣನ ಪಾತ್ರದಾರಿಗೆ 2-3 ಸಾರಿ ಕಪಾಳ ಮೋಕ್ಷ ಮತ್ತು ದ್ರೌಪದಿ ಪಾತ್ರದಾರಿಗೆ ಮೈಮೇಲೆ ಸಾರಾಯಿ ಸಿಂಪಡಿಸಿ ಆ ಪಾತ್ರಗಳಿಗೆ ಅವಹೇಳನ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಹುಬ್ಬಳ್ಳಿಯ ಕೇಶ್ವಾಪುರದ ಪ್ರಶಾಂತ್ ನರಗುಂದ 2025ರ ನವೆಂಬರ್ 15ರಂದು ದೂರು ನೀಡಿದ್ದರು. ದೂರು ಆಧರಿಸಿ, ಕಾಮಿಡಿ ಕಿಲಾಡಿಗಳು ಕಲಾವಿದರು, ಸ್ಕ್ರಿಪ್ಟ್ ರೈಟರ್, ನಿರ್ದೇಶಕ, ಝೀ ಕನ್ನಡ ವಾಹಿನಿ, ಜಿ5 ಒಟಿಟಿ, ಕಾಮಿಡಿ ಕಿಲಾಡಿಗಳು ಪ್ರಸಾರಕರು ಮತ್ತು ಇತರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 299ರ ಅಡಿ ಹುಬ್ಬಳ್ಳಿಯ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಪ್ರಕರಣ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.