ಮಂಗಳೂರು, ಜುಲೈ . 08: ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಎಸ್‌ಐಆರ್ ಕರ್ತವ್ಯಕ್ಕೆ ನೇಮಿಸಿ, ಮುಂದಿನ ಒಂದು ತಿಂಗಳ ಕಾಲ ಜನನ ಮತ್ತು ಮರಣಗಳ ನೋಂದಣಿ ಘಟಕದಲ್ಲಿ ಅರ್ಜಿ ಸ್ವೀಕಾರವನ್ನು ಬಂದ್ ಮಾಡಿರುವುದಾಗಿ ಬೋರ್ಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪಾಲಿಕೆಯ ನಡೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, “ಆಡಳಿತಾಧಿಕಾರಿ ಮೂಲಕ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಕಾರ ಇನ್ನು ಒಂದು ತಿಂಗಳು ಮಂಗಳೂರಿನಲ್ಲಿ ಜನನ ಮತ್ತು ಮರಣಗಳೇ ಸಂಭವಿಸುವುದಿಲ್ಲವೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಶಾಲಾ ಮಕ್ಕಳ ದಾಖಲಾತಿಗೆ ಜನನ ಪ್ರಮಾಣಪತ್ರ ಅತ್ಯಗತ್ಯವಾಗಿ ಬೇಕಿರುವ ಪೋಷಕರು ಮತ್ತು ತುರ್ತಾಗಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳಬೇಕಾದ ನಾಗರಿಕರು ಈಗ ಏನು ಮಾಡಬೇಕು? ಸರ್ಕಾರದ ಈ ಗೊಂದಲಕಾರಿ ನಿರ್ಧಾರದಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶಗೊಂಡು, ಶಾಸಕರಿಗೆ ದೂರು ನೀಡುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಪಾಲಿಕೆಯು ನಿನ್ನೆಯಿಂದ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಆದರೆ, “ಪ್ರಮಾಣಪತ್ರಕ್ಕಾಗಿ ಅರ್ಜೆಂಟ್ ಮಾಡುವ ಹಾಗಿಲ್ಲ” ಎಂಬ ಹೊಸ ಕಂಡೀಷನ್ ಹಾಕಿ ಜನರನ್ನು ಮತ್ತಷ್ಟು ಪೀಡಿಸುತ್ತಿದೆ ಎಂದು ಅವರು ದೂರಿದರು.
ಜನರಿಗೆ ನಾಗರಿಕ ಸೇವೆಗಳನ್ನು ನೀಡಲು ಸಾಧ್ಯವಾಗದಿದ್ದರೆ, “ಇನ್ನು ಒಂದು ತಿಂಗಳು ಮಂಗಳೂರಿನ ಜನರಿಂದ ಯಾವುದೇ ರೀತಿಯ ತೆರಿಗೆ ವಸೂಲಿ ಇಲ್ಲ” ಎಂದು ಪಾಲಿಕೆಯವರು ಬೋರ್ಡ್ ಹಾಕಲಿ ಎಂದು ಕಾಮತ್ ಸವಾಲು ಹಾಕಿದರು. ಕಾಂಗ್ರೆಸ್ ನೇತೃತ್ವದ ಪಾಲಿಕೆ ಆಡಳಿತವು ಜನರಿಗೆ ನೀಡುತ್ತಿರುವ ಹಿಂಸೆಗೆ ಪ್ರತಿನಿತ್ಯ ಪಾಲಿಕೆ ಕಚೇರಿ ಮುಂದೆ ನಾಗರಿಕರು ಸಾಲುಗಟ್ಟಿ ನಿಂತಿರುವುದೇ ಸಾಕ್ಷಿಯಾಗಿದೆ. ಈ ಅವ್ಯವಸ್ಥೆಯಿಂದಾಗಿ ಪ್ರತಿನಿತ್ಯ ಸಾರ್ವಜನಿಕರು ಮತ್ತು ಪಾಲಿಕೆ ಸಿಬ್ಬಂದಿ ನಡುವೆ ಅನಗತ್ಯ ಮಾತಿನ ಚಕಮಕಿಗಳು ನಡೆಯುತ್ತಿವೆ ಎಂದರು.
ಪಾಲಿಕೆಯು ತಕ್ಷಣವೇ ಈ ಎಲ್ಲಾ ಅವ್ಯವಸ್ಥೆಗಳಿಗೆ ಅಂತ್ಯ ಹಾಡಬೇಕು. ಸಾರ್ವಜನಿಕರ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುವಂತೆ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪಾಲಿಕೆ ಆಡಳಿತಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ನಿರ್ಧಾರಗಳಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್, ಆರ್.ಟಿ.ಸಿ, ಕನ್ವರ್ಷನ್ ಸೇರಿದಂತೆ ಎಲ್ಲವೂ ಅಯೋಮಯವಾಗಿದ್ದು, ಸಾರ್ವಜನಿಕರು ಅತ್ಯಂತ ಸುಲಭ ವಿಧಾನಗಳಲ್ಲಿ ಪಡೆಯಬೇಕಾಗಿದ್ದ ದಾಖಲೆಗಳಿಗೆ ತಿಂಗಳುಗಟ್ಟಲೆ ಅಲೆದಾಡುವಂತಾಗಿದೆ. ನಮ್ಮ ಮಂಗಳೂರಿನಲ್ಲಿ ಈಗ ಸಾರ್ವಜನಿಕರ ಪರಿಸ್ಥಿತಿ ಹೇಗಿದೆ ಎಂದರೆ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ಸರ್ವರ್ ಇರುವುದಿಲ್ಲ. ಅದು ಸರಿಯಾಗುವ ಮೊದಲು ಇನ್ನೊಂದು ತಾಂತ್ರಿಕ ದೋಷ. ಈ ದುರವಸ್ಥೆಯ ನಡುವೆ ಸರ್ಕಾರದಿಂದ ಇಂತಹ ಅರ್ಥವಿಲ್ಲದ ನಿರ್ಧಾರಗಳು.! ಇವೆಲ್ಲದರಿಂದ ಜನರ ಪಾಡು ಹೇಳ ತೀರದಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ, ಜನರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸುತ್ತೇನೆ.ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಮಂಡಲದ ಪದಾಧಿಕಾರಿ ಮಂಗಳಾ ಆಚಾರ್ ಉಪಸ್ಥಿತರಿದ್ದರು.



