canaratvnews

ಓಲೈಕೆಗಾಗಿ ಬ್ರದರ್ಸ್ ಗಳಿಗೆ ಅಮಾಯಕ ಪಟ್ಟ ಕಟ್ಟಿದ ಕಾಂಗ್ರೆಸ್ :- ಶಾಸಕ ಕಾಮತ್ ಆಕ್ರೋಶ

ಮಂಗಳೂರು:ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪವಿತ್ರ ಶಿವಲಿಂಗದ ವಿರೂಪಗೊಳಿಸಿ, ಭಕ್ತರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಗಂಭೀರ ಅಪರಾಧಿಗಳನ್ನು ಕಾಂಗ್ರೆಸ್ ಸರ್ಕಾರ ‘ಅಮಾಯಕರು’ ಎಂದು ಬಿಂಬಿಸಲು ಹೊರಟಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಆಳಂದದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ, ಜಿಲ್ಲಾಧಿಕಾರಿ ಮತ್ತು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಸಮಾಜಘಾತುಕ ಶಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ಮುಂದಾಗಿರುವುದು ಖಂಡನೀಯ. ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣಕ್ಕಾಗಿ ಇಂತಹ ದೇಶದ್ರೋಹಿ ಕೃತ್ಯ ಎಸಗಿದವರಿಗೆ ರಕ್ಷಣೆ ನೀಡಲಾಗುತ್ತಿದೆ. ಇವರು ಯಾವುದೇ ಕಾರಣಕ್ಕೂ ಅಮಾಯಕರಲ್ಲ, ಇವರಿಗೆ ಕಾನೂನಿನಡಿಯಲ್ಲಿ ತಕ್ಕ ಶಿಕ್ಷೆಯಾಗಲೇಬೇಕು” ಎಂದು ಒತ್ತಾಯಿಸಿದರು.
“ಇಂತಹ ಗಂಭೀರ ಕೃತ್ಯ ನಡೆಸಿದ ಆರೋಪಿಗಳ ಮೇಲಿನ ಪ್ರಕರಣವನ್ನು ಕೈಬಿಡುವಂತೆ ಸ್ವತಃ ಗೌರವಾನ್ವಿತ ಸ್ಪೀಕರ್ ಯು.ಟಿ.ಖಾದರ್ ಅವರೇ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಮತ್ತು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಸ್ಪೀಕರ್ ಸ್ಥಾನದಲ್ಲಿದ್ದುಕೊಂಡು ಒಂದು ಸಮುದಾಯದ ಪರವಾಗಿ ಪಕ್ಷಪಾತಿ ಧೋರಣೆ ತಳೆದಿರುವುದು ಸಂವಿಧಾನ ವಿರೋಧಿ” ಎಂದು ಕಾಮತ್ ಹರಿಹಾಯ್ದರು.
ಮುಂದುವರಿದು ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರವು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ರೌಡಿ ಶೀಟರ್ ಪಟ್ಟಿ ತೆರೆಯುವ ಮೂಲಕ ಕಿರುಕುಳ ನೀಡುತ್ತಿದೆ. ಇನ್ನೊಂದೆಡೆ ಮುಸ್ಲಿಂ ಮೂಲಭೂತವಾದಿಗಳ ವಿರುದ್ಧದ ಗಂಭೀರ ಪ್ರಕರಣಗಳನ್ನು ಹಿಂಪಡೆದು, ಅವರು ಇನ್ನಷ್ಟು ದುಷ್ಕೃತ್ಯ ಎಸಗಲು ಪ್ರೇರಣೆ ನೀಡುತ್ತಿದೆ. ಕೇವಲ ಸ್ವಾರ್ಥ ರಾಜಕಾರಣಕ್ಕಾಗಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್, ನಾಡಿನ ಸುರಕ್ಷತೆಯನ್ನು ಗಾಳಿಗೆ ತೂರಿದೆ. ಸರ್ಕಾರ ಈ ಕೂಡಲೇ ತನ್ನ ಅವಿವೇಕದ ನಿರ್ಧಾರವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.
Share News
Exit mobile version