ಮಂಗಳೂರು: “ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಪಾಠ ಮಾಡುವ ಕಾಂಗ್ರೆಸ್ ನಾಯಕರು, ಮೊದಲು ತಾವು ಅದನ್ನು ಪಾಲಿಸುತ್ತಿ ದ್ದೇವೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ” ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದ್ದಾರೆ.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-2 ರಡಿ 165 ಕೋಟಿ ರೂ.ಗಳ ಕಾಮಗಾರಿಯಾಗಿದ್ದು, ಅದಕ್ಕೆ ಹಣ ಎಲ್ಲಿಂದ ಬಂತು ಕಾಂಗ್ರೆಸ್ ನಾಯಕರು ಕೇಳಿದ್ದಾರೆ. ಪ್ರಶ್ನೆ ಕೇಳಿದ ಸ್ವತಃ ಅವರಿಗೇ ಉತ್ತರ ಗೊತ್ತಿದೆ. ಆದರೂ ಜನರಲ್ಲಿ ಗೊಂದಲ ಮೂಡಿಸುವ ವಿಫಲ ಯತ್ನ ನಡೆಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-1 165 ಕೋಟಿ ರೂ. ಘೋಷಣೆಯಾಗಿತ್ತು. (ದಾಖಲೆಗಳನ್ನು ಲಗತ್ತಿಸಲಾಗಿದೆ) ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮಂಗಳೂರು ಸಹಿತ ಎಲ್ಲಾ ಮಹಾನಗರ ಪಾಲಿಕೆಗಳಿಗೆ ಬಿಡುಗಡೆಯಾದ ಅನುದಾನಗಳಿಗೆ ತಡೆ ನೀಡಿತು. (ದಾಖಲೆಗಳನ್ನು ಲಗತ್ತಿಸಲಾಗಿದೆ) ಈಗ ಯೋಜನೆಯ ಹೆಸರಿನ ಮುಂದೆ “2” ಸೇರಿಸಿ ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ ಎಂದು ಅಲ್ಲಲ್ಲಿ ಬ್ಯಾನರ್ ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಅದೇ ಯೋಜನೆ, ಅದೇ ಅನುದಾನ. ಹೆಸರು ಮಾತ್ರ ಬದಲಾವಣೆ ಅಷ್ಟೇ. ಇದು ಕಾಂಗ್ರೆಸ್ ಸಾಧನೆ.!
ಹಿಂದಿನ ಯೋಜನೆಗೆ ತಡೆ ನೀಡಿದ್ದು ಯಾಕೆ? ಈಗ ಅದೇ ಯೋಜನೆಗೆ ಬೇರೆ ಹೆಸರು ನೀಡಿರುವುದು ಯಾಕೆ? ಹಾಗಾದರೆ ಇಲ್ಲಿ ರಾಜಕಾರಣ ಮಾಡುತ್ತಿರುವುದು ಯಾರು? ಇದರಲ್ಲಿ ಹಣಕಾಸು ಇಲಾಖೆಯ ಅನುಮೋದನೆ ಪಡೆಯದೇ, ಶಿಲಾನ್ಯಾಸ ನಡೆಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅವರು ಹಿಂದಿನ ಸರ್ಕಾರದ ಬಜೆಟ್ ಪುಟಗಳ ದಾಖಲೆಗಳನ್ನು ತಿರುವಿ ಹಾಕಿ ನೋಡಲಿ. 165 ಕೋಟಿ ರೂ.ಗಳ ಯೋಜನೆ ಬಜೆಟ್ ನಲ್ಲೇ ಘೋಷಣೆಯಾಗಿದೆ. (ದಾಖಲೆಗಳನ್ನು ಲಗತ್ತಿಸಲಾಗಿದೆ ) ಹಣಕಾಸು ಇಲಾಖೆಯ ಅನುಮತಿ ನಂತರವೇ ಬಜೆಟ್ ನಲ್ಲಿ ಘೋಷಣೆಯಾಗಲು ಸಾಧ್ಯ ಎಂಬ ಕನಿಷ್ಠ ಜ್ಞಾನ ಇರುವ ಯಾರಿಗಾದರೂ ತಿಳಿದಿರುತ್ತದೆ.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ಬಿಜೆಪಿ-ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಕೊಟ್ಟಿದ್ದೇವೆ ಎಂದು ಹೇಳುವ ಇವರು, ಅದರಿಂದ ಕ್ಷೇತ್ರದಲ್ಲಿ ಒಂದಾದರೂ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ಹಾಕಿದ, ಕಾಮಗಾರಿಯ ಟೆಂಡರ್ ಕರೆದ ದಾಖಲೆ ಕೊಡಬಲ್ಲರಾ? ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೂ ನೀಡಲೇಬೇಕಾದ ಅನುದಾನವನ್ನು ನೀಡಿ ಅದೇ ದೊಡ್ಡ ಸಾಧನೆ ಎಂಬಂತೆ ತೋರಿಸಿಕೊಳ್ಳುವುದರಲ್ಲಿ ಏನಿದೆ? ಯಾವ ಸರ್ಕಾರ ಇದ್ದರೂ ಕೊಡಲೇಬೇಕು. ನಮ್ಮ ಕ್ಷೇತ್ರಕ್ಕೆ ಯಾವುದಾದರೂ ವಿಶೇಷ ಅನುದಾನ ನೀಡಿದ್ದರೆ ಅದು ನಮ್ಮ ಸರ್ಕಾರದ ಸಾಧನೆ ಎಂದು ಜನತೆ ಮುಂದೆ ಇಡಲಿ.
ವಿಶೇಷ ಯೋಜನೆ ಬರಬೇಕಾದರೆ ಪಕ್ಷಬೇಧ ಮರೆತು ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸೋಣ ಎಂದಿರುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಹಮತವಿದೆ. ಅದಕ್ಕೂ ಮೊದಲು ನಮ್ಮ ಕ್ಷೇತ್ರಕ್ಕೆ, ನಮ್ಮ ಜಿಲ್ಲೆಗೆ, ನಮ್ಮ ಕರಾವಳಿಗೆ ಈ ಬಾರಿಯ ಬಜೆಟ್ ನಲ್ಲಿ ಏನು ನೀಡಬೇಕು ಎಂಬುದರ ಬಗ್ಗೆ ಮಾನ್ಯ ಸ್ಪೀಕರ್, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಕಾಂಗ್ರೆಸ್ ನಾಯಕರು, ಅಧಿಕಾರಿಗಳು ಬೆಂಗಳೂರಿನಲ್ಲಿ, ಮಂಗಳೂರಿನಲ್ಲಿ ಎರಡೆರಡು ಸಭೆ ಮಾಡಿದರೂ ಕೊನೆಗೆ ಏನೂ ಸಿಗಲಿಲ್ಲ. ನಿಮ್ಮ ಸರ್ಕಾರ ನಿಮಗೇ ಬೆಲೆ ನೀಡಿಲ್ಲವಾದ ಮೇಲೆ ನಮ್ಮ ಮಾತಿಗೆ ಬೆಲೆ ನೀಡುತ್ತದಾ?
ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ದಿನ 70 ಕ್ಕಿಂತ ಹೆಚ್ಚು ಗುದ್ದಲಿ ಪೂಜೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿರುವ ದಾಖಲೆ ಇದೆ. (ದಾಖಲೆಗಳನ್ನು ಲಗತ್ತಿಸಲಾಗಿದೆ ) ಆದರೆ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಗುದ್ದಲಿ ಪೂಜೆ ನಡೆಯುವುದೂ ಸಹ ಕಷ್ಟವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಎಲ್ಲಾ ಅನುದಾನಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ತಡೆ ನೀಡಿತ್ತು. ನಂತರ ಸತತ ಪ್ರಯತ್ನದ ಫಲವಾಗಿ ಇದರಲ್ಲಿ ಕೆಲವೇ ಕೆಲವು ಕಾಮಗಾರಿಗಳು ಇದೀಗ ಮತ್ತೆ ಆರಂಭವಾಗುತ್ತಿದೆ. ಈಗ ಕಾಂಗ್ರೆಸ್ ನಾಯಕರು ನೋಡುತ್ತಿರುವುದು ಅಂತಹದೇ ಗುದ್ದಲಿ ಪೂಜೆಗಳು ಹಾಗಾದರೆ ಅದು ಈಗಿನ ಕಾಂಗ್ರೆಸ್ ಸರ್ಕಾರದ ಅನುದಾನವಾಗುತ್ತದೆಯೇ? ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ.
4 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಹೂಳೆತ್ತುತ್ತಿದ್ದೇವೆ ಎಂದು ಭಾರೀ ಹುಮ್ಮಸ್ಸಿನಿಂದ ಹೇಳಿಕೆ ಕೊಡುವ ಕಾಂಗ್ರೆಸ್ ನಾಯಕರಿಗೆ, ಅದು ಪ್ರತೀ ವರ್ಷವೂ ನಡೆದೇ ನಡೆಯುತ್ತದೆ ಎಂಬುದರ ಅರಿವಿಲ್ಲವೇ? ಅದು ಮಹಾನಗರ ಪಾಲಿಕೆಯ ಅನುದಾನ. ಇಲ್ಲಿನ ಜನರ ತೆರಿಗೆಯ ಹಣ. ಇದನ್ನೂ ಸಹ ನಮ್ಮ ಸರ್ಕಾರದ ಸಾಧನೆ ಎನ್ನುವುದಾ? ನಾಳೆ ಇವರು ನಮ್ಮ ಸರ್ಕಾರ ನೀರು ಕೊಟ್ಟಿದೆ, ರಸ್ತೆ ಗುಂಡಿ ಮುಚ್ಚಿದೆ ಎಂದು ಹೇಳುವುದರೂ ಆಶ್ಚರ್ಯವಿಲ್ಲ.
10 ಕೋಟಿ ರೂ. ಮಳೆ ಹಾನಿಯ ಪರಿಹಾರ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಇತ್ತು. ಈಗಲೂ ಇದೆ. ಅದರಲ್ಲೇನೂ ವಿಶೇಷತೆಯಿಲ್ಲ. ಮಳೆ ಹಾನಿಯ ಕುರಿತು ಸ್ಥಳೀಯ ಶಾಸಕರನ್ನು ಒಳಗೊಂಡು ಜಿಲ್ಲಾಧಿಕಾರಿಗಳು ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಅದರಂತೆ ಪರಿಹಾರಗಳು ಬರುತ್ತವೆ. ಅದು ಸ್ಥಳೀಯ ಶಾಸಕರ ಹಕ್ಕು. ಪರಿಹಾರದ ಆದೇಶದಲ್ಲಿಯೂ ಮಂಗಳೂರು ನಗರ ದಕ್ಷಿಣದ ಶಾಸಕರ ಹೆಸರು ಉಲ್ಲೇಖವಿದೆ. ಅದರಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ವಿಶೇಷ ಸಾಧನೆ ಎಂದು ಬಿಂಬಿಸುವುದರಲ್ಲಿ ಏನಿದೆ? ನಾನೇ ಸರಕಾರದಿಂದ ಪರಿಹಾರಗಳು ತಂದಿದ್ದು ಅಂತ ಎಲ್ಲೆಡೆ ಸ್ಥಳ ವೀಕ್ಷಣೆ ನಡೆಸಿ, ಬ್ಯಾನರ್ ಹಾಕಿಕೊಂಡು, ಪತ್ರಿಕಾ ಹೇಳಿಕೆ ನೀಡುವುದು ಯಾವ ಸೀಮೆಯ ರಾಜಕಾರಣ?
ನಗರದಲ್ಲಿ ಅಮೃತ ಯೋಜನೆ, ಜಲಸಿರಿ, ಹಾಗೂ ಒಳಚರಂಡಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ವಾಸ್ತವದಲ್ಲಿ ಅದು ಕೇಂದ್ರ ಸರ್ಕಾರದ ಯೋಜನೆಗಳು. ಅನುದಾನಗಳನ್ನು ನೀಡಿದ್ದೂ ಸಹ ಕೇಂದ್ರ ಸರ್ಕಾರ. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಯೋಜನೆಗಳಿಗೆ ಅನುದಾನ ಕೊಟ್ಟ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.