ಬೆಂಗಳೂರು ಆ. 18: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಕಾಳುಮೆಣಸು (ಕರಿಮೆಣಸು) ಬೆಳೆಗಾರರ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿರುವ ತೋಟಗಾರಿಕಾ ಅನುದಾನ ತೀರಾ ಕಡಿಮೆಯಾಗಿದ್ದು, ಇದನ್ನು ತಕ್ಷಣವೇ ಹೆಚ್ಚಿಸಬೇಕೆಂದು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂದು ನಡೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ರಾಜ್ಯದ ಕಾಳುಮೆಣಸು ಬೆಳೆಗಾರರ ಸಮಸ್ಯೆಗಳು ಮತ್ತು ಅವರಿಗೆ ಸಿಗುವ ಆರ್ಥಿಕ ನೆರವಿನ ಕುರಿತು ಶಾಸಕರು ಕೇಳಿದ ಲಿಖಿತ ಪ್ರಶ್ನೆಗೆ ತೋಟಗಾರಿಕಾ ಇಲಾಖೆಯು ಲಿಖಿತ ಉತ್ತರದ ಮೂಲಕ ವಿವರಗಳನ್ನು ನೀಡಿದೆ.
ಸರ್ಕಾರದ ಉತ್ತರದ ಮುಖ್ಯಾಂಶಗಳು:ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳು ಸೇರಿದಂತೆ ಒಟ್ಟು 2.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕರಿಮೆಣಸು ಬೆಳೆಯಲಾಗುತ್ತಿದೆ. ‘ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ’ (VB-G-RAM-G) ಯೋಜನೆಯಡಿ ಬೆಳೆಗಾರರಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ.
1. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (MIDH) ಯೋಜನೆಯಡಿ ತೋಟಗಾರಿಕ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಕರಿಮೆಣಸು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. 1.00 ಲಕ್ಷಗಳ ಘಟಕ ವೆಚ್ಚ ನಿಗದಿಪಡಿಸಲಾಗಿದ್ದು, ಅದರ ಶೇ.40ರಷ್ಟು ಸಹಾಯಧನವಾಗಿ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ರೂ. 40,000 ಗಳವರೆಗೆ ಸಹಾಯಧನ ನೀಡಲಾಗುತ್ತಿದೆ. ಫಲಾನುಭವಿಯು ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನವನ್ನು ಪಡೆಯಲು ಅವಕಾಶವಿರುತ್ತದೆ. ಪ್ರಸಕ್ತ 2026-27ನೇ ಸಾಲಿನಲ್ಲಿ ಕರಿಮೆಣಸು ಸೇರಿದಂತೆ ಇತರೆ ಬಹುವಾರ್ಷಿಕ ಸಾಂಬಾರು ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ರೂ. 266.80 ಲಕ್ಷಗಳ ಅನುದಾನವನ್ನು ನಿಗದಿಪಡಿಸಿರುವುದಾಗಿ ಸರ್ಕಾರ ಉತ್ತರಿಸಿದೆ. ಈ ಅನುದಾನ ತುಂಬಾ ಕಡಿಮೆ ಇದ್ದು ಇದನ್ನು ಹೆಚ್ಚಳ ಮಾಡಬೇಕಾಗಿ ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ. ಹಾಗೂ ಈ ಬಗ್ಗೆ ಮಾನ್ಯ ತೋಟಗಾರಿಕಾ ಸಚಿವರಿಗೆ ಪತ್ರ ಮುಖಾಂತರ ಅನುದಾನ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
2. ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಕಾಳುಮೆಣಸು ಒಳಗೊಂಡಂತೆ ಎಲ್ಲಾ ತೋಟಗಾರಿಕೆ ಬೆಳೆಗಳಲ್ಲಿ ಕಂಡು ಬರುವ ಮತ್ತು ರೋಗಗಳ ನಿರ್ವಹಣೆಗಾಗಿ ಸಾಮಾನ್ಯ ವರ್ಗದ ರೈತರಿಗೆ ಘಟಕ 5 75% ರಂತೆ ರೂ. 7500 ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ 90% ರಂತೆ ರೂ. 9000 ಸಹಾಯಧನವನ್ನು ಗರಿಷ್ಠ 1 ಹೆಕ್ಟೇರ್ ವರೆಗೆ ನೀಡಲಾಗುವುದು. ಯೋಜನೆಯಡಿ ರೂ. ಪ್ರಸಕ್ತ 2026-27ನೇ ಸಾಲಿನಲ್ಲಿ ಸದರಿ 135.00 ಅನುದಾನವನ್ನು ನಿಗದಿಪಡಿಸಿರುವುದಾಗಿ ಸರ್ಕಾರ ಉತ್ತರಿಸಿದೆ.
3. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಾಳುಮೆಣಸು ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಮಗ್ರ ರೋಗ/ಕೀಟಗಳ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ರೂ.5000/- ಪ್ರತಿ ಹೆಕ್ಟೇರ್ ಘಟಕ ವೆಚ್ಚದಲ್ಲಿ ಶೇ.30ರಂತೆ ಪ್ರತಿ ಹೆಕ್ಟೇರಿಗೆ ರೂ.1500/- ರಂತೆ 2 ಹೆಕ್ಟೇರ್ ರವರೆಗೆ ರೂ.3000/- ಗಳ ಸಹಾಯಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಒಟ್ಟು ರೂ. 400.01 ಲಕ್ಷಗಳ ಅನುದಾನ ನಿಗದಿಪಡಿಸಿಲಾಗಿದ್ದು ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗುತ್ತಿದೆ ಎಂಬುದಾಗಿ ಸರ್ಕಾರ ಉತ್ತರಿಸಿದೆ.
ವಿಬಿ-ಜಿ- ರಾಮ್ ಜಿ ಯೋಜನೆಯಲ್ಲಿ ಕಾಳುಮೆಣಸು ಬೆಳೆಯಲು ರೈತರಿಗೆ ಅವಕಾಶ :
ವಿವಿಧ ಪ್ರದೇಶಗಳಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು ಬೆಳೆಯುವ ಸದರಿ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ವಿವಿಧ ಮಿಶ್ರ ಬೆಳೆಯಾಗಿ ಕಾಳುಮೆಣಸು ಬೆಳೆಯುವ ರೈತರಿಗೆ ಆರ್ಥಿಕ ಸಹಾಯ ದೊರಕಲಿದೆ.
೧. ಅಡಕೆ ಕೃಷಿಯಲ್ಲಿ ಮಿಶ್ರಬೆಳೆಯಾಗಿ ಕಾಳುಮೆಣಸು 1 ಹೆಕ್ಟೇರ್ ಗೆ ರೂ. 1,17,975 /-
೨. ತೆಂಗಿನ ಬೆಳೆಯಲ್ಲಿ ಮಿಶ್ರಬೆಳೆಯಾಗಿ ಕಾಳುಮೆಣಸು 1 ಹೆಕ್ಟೇರ್ ಗೆ ರೂ. 18,265 /-
೩. ಕಾಫಿ ಬೆಳೆಯಲ್ಲಿ ಮಿಶ್ರಬೆಳೆಯಾಗಿ ಕಾಳುಮೆಣಸು 1 ಹೆಕ್ಟೇರ್ ಗೆ ರೂ. 25,075 /-
೪. ರೋಬಸ್ಟಾಆ ಕಾಫಿ ಬೆಳೆಯಲ್ಲಿ ಮಿಶ್ರಬೆಳೆಯಾಗಿ ಕಾಳುಮೆಣಸು 1 ಹೆಕ್ಟೇರ್ ಗೆ ರೂ.31,776 /-
೫. ಅರೇಬಿಕಾ ಕಾಫಿ ಬೆಳೆಯಲ್ಲಿ ಮಿಶ್ರಬೆಳೆಯಾಗಿ ಕಾಳುಮೆಣಸು 1 ಹೆಕ್ಟೇರ್ ಗೆ ರೂ. 55,151 /-
ವಿಬಿ-ಜಿ-ರಾಮ್ ಜಿ ಯೋಜನೆಯನ್ನು ರೈತರು ಸದುಪಯೋಗ ಪಡಿಸಿಕೊಂಡು ರೈತರು ಹೆಚ್ಚಿನ ಪ್ರಮಾಣದಲ್ಲಿ ಕಾಳುಮೆಣಸು ಬೆಳೆಯನ್ನು ಬೆಳೆಯಲು ಆಸಕ್ತಿ ವಹಿಸಬೇಕು ಎಂಬುದಾಗಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
