ಮಂಗಳೂರು: ದೆಹಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಉಮರ್ ಖಾಲಿದ್‌ನನ್ನು “ದೇಶಭಕ್ತ” ಎಂದು ಕರೆದಿರುವ ಕಾಂಗ್ರೆಸ್ ನಾಯಕರ ನಡೆ ತೀವ್ರ ಖಂಡನೀಯ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಎನ್‌ಎಲ್‌ಎಸ್‌ಐಯು (NLSIU) ಸಂಸ್ಥೆಯಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು “ಉಮರ್ ಖಾಲಿದ್ ದೇಶಭಕ್ತ, ಗೋಡ್ಸೆಯನ್ನು ಆರಾಧಿಸುವ ಎಬಿವಿಪಿಗೆ ಮಾತನಾಡುವ ನೈತಿಕ ಹಕ್ಕಿಲ್ಲ” ಎಂದು ಹೇಳಿಕೆ ನೀಡಿರುವುದಕ್ಕೆ ಅವರು ಪತ್ರಿಕಾ ಹೇಳಿಕೆ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.

ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿ:
ದೆಹಲಿ ಗಲಭೆ ಪ್ರಕರಣದಲ್ಲಿ ದೇಶವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಜೈಲು ಸೇರಿರುವ, ಸುಪ್ರೀಂ ಕೋರ್ಟ್‌ನಿಂದಲೂ ಸತತವಾಗಿ ಜಾಮೀನು ನಿರಾಕರಿಸಲ್ಪಟ್ಟಿರುವ ವ್ಯಕ್ತಿಯನ್ನು ದೇಶಭಕ್ತ ಎಂದು ಕರೆಯುವುದು ಕಾಂಗ್ರೆಸ್‌ನ ದೇಶವಿರೋಧಿ ಮನಸ್ಥಿತಿ ಮತ್ತು ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಡಾ. ಭರತ್ ಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ. ದೇಶವನ್ನು ಒಡೆಯಲು ಸಂಚು ರೂಪಿಸಿದವರ ಪರವಾಗಿ ಬಹಿರಂಗವಾಗಿ ನಿಲ್ಲುವ ಮೂಲಕ ಕಾಂಗ್ರೆಸ್‌ನ ‘ತುಕ್ಡೆ-ತುಕ್ಡೆ’ ನೀತಿ ಮತ್ತೊಮ್ಮೆ ಬಟಾಬಯಲಾಗಿದೆ ಎಂದು ಅವರು ಟೀಕಿಸಿದ್ದಾರೆ.
ಕ್ಷಮೆಯಾಚನೆಗೆ ಆಗ್ರಹ:
ರಾಷ್ಟ್ರದಾದ್ಯಂತ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ದೇಶಭಕ್ತ ಯುವಶಕ್ತಿಯನ್ನು ಅವಮಾನಿಸಿರುವ ಬಿ.ಕೆ. ಹರಿಪ್ರಸಾದ್ ಅವರು ತಕ್ಷಣ ದೇಶದ ಜನತೆಯ ಕ್ಷಮೆ ಯಾಚಿಸಬೇಕು. ದೇಶವಿರೋಧಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್‌ಗೆ ಮುಂಬರುವ ದಿನಗಳಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.
