ಮಂಗಳೂರು. ಮೇ 27: ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಫೋಟೋವನ್ನು ದುರ್ಬಳಕೆ ಮಾಡಿ, ಫೇಸ್‌ಬುಕ್‌ನಲ್ಲಿ ಎಡಿಟ್ ಮಾಡಿದ ಚಿತ್ರಗಳೊಂದಿಗೆ ಸುಳ್ಳು ಸುದ್ದಿ ಪ್ರಚಾರ ಮಾಡಿದ ಆರೋಪದ ಮೇಲೆ ಡಾ. ಲಕ್ಷ್ಮೀಕಾಂತ್ ಸಿಂಗೆ ಎಂಬ ವ್ಯಕ್ತಿಯ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಟದ ವತಿಯಿಂದ ನೀಡಲಾದ ಈ ದೂರಿನನ್ವಯ, ಆರೋಪಿಯ ವಿರುದ್ಧ ಬರ್ಕೆ ಠಾಣೆಯಲ್ಲಿ FIR ಸಂಖ್ಯೆ: 56/2026, ಕಲಂ 79 ಮತ್ತು 352(2) BNS ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಪ್ರಧಾನಿಗಳ ತೇಜೋವಧೆ ಮಾಡುವ ಹಾಗೂ ಸಾರ್ವಜನಿಕರಲ್ಲಿ ದಾರಿ ತಪ್ಪಿಸುವ ಉದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಠಾಣೆಗೆ ತೆರಳಿ ದೂರು ನೀಡಿದ ಕಾನೂನು ಪ್ರಕೋಷ್ಟದ ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ಶ್ರೀಧರ್ ಶೆಟ್ಟಿ ಪುಳಿಂಚ, ಸಹ ಸಂಚಾಲಕರಾದ ಕೆ. ಪ್ರಮೋದ್ ಪೂಜಾರಿ, ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷರಾದ ರಾಘವೇಂದ್ರ ರಾವ್ ಹಾಗೂ ವಕೀಲರಾದ ಶುಕರಾಜ್ ಕೊಟ್ಟಾರಿ ಮತ್ತು ಜಗದೀಶ್ ಕಾಪುಮಲೆ ಉಪಸ್ಥಿತರಿದ್ದರು.