canaratvnews

ಆಧ್ಯಾತ್ಮವೇ ಇಂದಿನ ಸಮಾಜದ ಸಮಸ್ಯೆಗಳಿಗೆ ಪರಿಹಾರ’ – ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ಮಂಗಳೂರು, ಜೂ. 14 : ಆರಾಧನೆ ಮತ್ತು ಆಧ್ಯಾತ್ಮಿಕ ಚಿಂತನೆಯ ಮೂಲಕ ಆನ್ನೋನ್ನತಿ ಸಾಧಿಸಲು ಸಾಧ್ಯವಾಗುತ್ತದೆ. ಭಜನೆ, ಧ್ಯಾನ ಹಾಗೂ ಸಂಕೀರ್ತನೆಗಳಿಂದ ಮನಸ್ಸು ಪ್ರಫುಲ್ಲಗೊಂಡು ನೆಮ್ಮದಿ ದೊರೆಯುತ್ತದೆ ಎಂದು ಮಾಣಿಲ ಶ್ರೀಧಾಮ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಮಾಣಿಲ ಶ್ರೀಧಾಮದಲ್ಲಿ ನಡೆಯಲಿರುವ 27ನೇ ವರ್ಷದ 48 ದಿನಗಳ ವರಮಹಾಲಕ್ಷ್ಮೀ ಆಚರಣೆಯ ಹಿನ್ನೆಲೆಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದ ಅವರು, ಇಂದಿನ ಸಮಾಜದಲ್ಲಿ ಆಧ್ಯಾತ್ಮಿಕ ಮೌಲ್ಯಗಳ ಅಗತ್ಯತೆಯನ್ನು ಒತ್ತಿಹೇಳಿದರು.


“ಮಾದಕ ವಸ್ತುಗಳ ಸೇವನೆಯಷ್ಟೇ ಅಲ್ಲದೆ, ಅನೇಕರು ಜೀವನದ ಸರಿದಾರಿಯಿಂದ ತಪ್ಪುತ್ತಿದ್ದಾರೆ. ಜನರು ಮಾನಸಿಕ ಅಶಾಂತಿ ಹಾಗೂ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಗೆ ಆಧ್ಯಾತ್ಮವೇ ಶಾಶ್ವತ ಪರಿಹಾರ. ದೇವಸ್ಥಾನ, ಯಾಗ-ಯಜ್ಞ, ಭಜನೆ ಹಾಗೂ ಸಂಕೀರ್ತನೆಗಳ ಮೂಲಕ ಭಕ್ತಿಯ ವಾತಾವರಣ ನಿರ್ಮಾಣವಾದಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ” ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಭಕ್ತರ ಹೃದಯದಲ್ಲಿ ನೆಲೆಸಿರುವ ಮಹಾಲಕ್ಷ್ಮಿಯ ಆರಾಧನೆಯಿಂದ ಒತ್ತಡ ನಿವಾರಣೆಯಾಗುವುದರ ಜೊತೆಗೆ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ವರಮಹಾಲಕ್ಷ್ಮೀ ಆಚರಣೆಯ ಯಶಸ್ವಿ ಆಯೋಜನೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರಾದ ಕೆಯ್ಯರು ನಾರಾಯಣ ಭಟ್, ಶ್ರೀಧರ ಬಾಳೆಕಲ್ಲು, ದೇವಪ್ಪ ಕುಲಾಲ್, ವನಿತಾ ಶೆಟ್ಟಿ, ರೇವತಿ ಪೆರ್ನೆ, ಕಲ್ಲಟೆ ವೆಂಕಟ್ರಮಣ ಭಟ್, ಹರೀಶ್ ಬೊಟ್ಟಾಡಿ, ಮುರಳೀ ಮಧೂರು, ನವೀನ್ ಪುತ್ತಿಗೆ, ರಮ್ಯಾ ಎಸ್., ಹೇಮಲತಾ ಶರ್ಮ, ಮಚ್ಚೇಂದ್ರ ಸಾಲ್ಯಾನ್, ಸತೀಶ್ ಪುಣ್ಣಿತ್ತಾಯ, ರಮೇಶ್, ಬಾಲಕೃಷ್ಣ ಶೆಟ್ಟಿ, ವೇಣುಗೋಪಾಲ ಶೇಣಿ, ನವೀನ್ ಕುಲಾಲ್ ಹಾಗೂ ಸುರೇಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೇಯಾ ಮತ್ತು ಶಾರ್ವಿ ಪ್ರಾರ್ಥನಾ ಗೀತೆ ಹಾಡಿದರು. ಟ್ರಸ್ಟಿ ದೇವಪ್ಪ ಕುಲಾಲ್ ಸ್ವಾಗತಿಸಿದರು. ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು. ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

Share News
Exit mobile version