canaratvnews

ಶ್ರೀಧಾಮ ಮಾಣಿಲದಲ್ಲಿ 26ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ

ವಿಟ್ಲ: ಮಾಣಿಲ:ಪ್ರಖ್ಯಾತ ಪುಣ್ಯಕ್ಷೇತ್ರವಾದ ಶ್ರೀಧಾಮ ಮಾಣಿಲದಲ್ಲಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ, ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ‘ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ’ಯ 26ನೇ ವರ್ಷದ ಧಾರ್ಮಿಕ ಮಹೋತ್ಸವಕ್ಕೆ ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಚಾಲನೆ ದೊರೆತಿದೆ.

48 ದಿನಗಳ ನಿರಂತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸೇವೆಗಳು: ಮಂಡಲಾವಧಿಯ 48 ದಿನಗಳ ಕಾಲ ಶ್ರೀಧಾಮದಲ್ಲಿ ಪ್ರತಿದಿನವೂ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಭಕ್ತಿಪೂರ್ವಕವಾಗಿ ನಡೆಯುತ್ತಿವೆ. ಈ ಸುದೀರ್ಘ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಮತ್ತು ಮಹಾಪೂಜೆ,ನಾಗದೇವರ ಪೂಜೆ ಮತ್ತು ಆಶ್ಲೇಷಾ ಬಲಿ,ಗೋಮಾತಾ ಪೂಜೆ ಮತ್ತು ಕನಕಧಾರಾ ಯಾಗ,ಶ್ರೀ ದುರ್ಗಾ ಪೂಜೆ ಮತ್ತು ಸಾಮೂಹಿಕ ಕುಂಕುಮಾರ್ಚನೆ,ವಾಯನದಾನ ಮತ್ತು ನಿರಂತರ ಅನ್ನಪ್ರಸಾದ ಸೇವೆ ವಿಶೇಷ ಪೂಜೆಗಳು ಜರುಗಲಿವೆ:

ಅವಧೂತರ ಸ್ಮರಣೆ – ನಿರಂತರ ಬಾಲಭೋಜನ:

ಭಗವಾನ್ ಸ್ವರೂಪಿ ಅವಧೂತ ಸದ್ಗುರು ಶ್ರೀ ಶ್ರೀ ನಿತ್ಯಾನಂದ ಸ್ವಾಮೀಜಿಯವರ ಮಹಾನ್ ಕೈಂಕರವಾಗಿದ್ದ ‘ಬಾಲಭೋಜನ’ ಸೇವೆಯು, ಸದ್ಗುರುಗಳ ಆಶೀರ್ವಾದದಂತೆ ಪ್ರತಿನಿತ್ಯವೂ ಶ್ರೀಧಾಮ ಮಾಣಿಲದಲ್ಲಿ ನಿರಂತರವಾಗಿ ಜರುಗುತ್ತಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಪೂಜೆ ಮತ್ತು ಯಾಗಾದಿಗಳಿಗೆ ಭಕ್ತರೇ ಪ್ರೀತಿಯಿಂದ ತಮ್ಮ ತೋಟಗಳಲ್ಲಿ ಬೆಳೆಸಿ ತರುವ ಸ್ಥಳೀಯ ಹೂವುಗಳಿಂದಲೇ ಪ್ರತಿದಿನ ದೇವಿಗೆ ನಯನಮನೋಹರ ಪುಷ್ಪಾಲಂಕಾರ ಮಾಡಲಾಗುತ್ತಿದೆ.

ಭಕ್ತರಿಗೆ ವಿಶೇಷ ಸೌಭಾಗ್ಯ – ಒಂದು ದಿನದ ಸೇವೆ:

ದಿನದ ಸೇವೆ: ಈ 48 ದಿನಗಳ ಸುದೀರ್ಘ ಪೂಜಾ ವಿಧಿವಿಧಾನಗಳಲ್ಲಿ ಭಕ್ತರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕ್ಷೇತ್ರವು ವಿಶೇಷ ಅವಕಾಶ ಕಲ್ಪಿಸಿದೆ. ಭಗವದ್ಭಕ್ತರು ಈ ಅವಧಿಯಲ್ಲಿ ತಮಗೆ ಇಚ್ಛಿತವಾದ ಯಾವುದಾದರೂ ಒಂದು ದಿನವನ್ನು ತಮ್ಮದಾಗಿಸಿಕೊಂಡು, ಕುಟುಂಬ ಸಮೇತರಾಗಿ ಶ್ರೀಧಾಮಕ್ಕೆ ಆಗಮಿಸಿ ಶ್ರೀ ಲಕ್ಷ್ಮೀ ಪೂಜೆಯನ್ನು ನೆರವೇರಿಸಿ ತಾಯಿಯ ಹಾಗೂ ಜಗದ್ಗುರುಗಳ ಕೃಪೆಗೆ ಪಾತ್ರರಾಗಬಹುದಾಗಿದೆ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದ್ದಾರೆ

Share News
Exit mobile version