ವಿಟ್ಲ:ಗ್ರಾಮೀಣ ಭಾಗದ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ (ಮಂಗಳೂರು), ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ (ದೇರಳಕಟ್ಟೆ, ಮಂಗಳೂರು) ಹಾಗೂ ಮಾತೃಭೂಮಿ ಯುವ ವೇದಿಕೆ (ರಿ., ಮಾಣಿಲ, ಬಂಟ್ವಾಳ) ಇವುಗಳ ಜಂಟಿ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ಉಚಿತ ನೇತ್ರ ತಪಾಸಣಾ ಮತ್ತು ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಬೃಹತ್ ಆರೋಗ್ಯ ಶಿಬಿರವು ಬರುವ ಭಾನುವಾರ, ಅಕ್ಟೋಬರ್ 4 ರಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ಬಂಟ್ವಾಳ ತಾಲೂಕಿನ ಮಾಣಿಲದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮುರುವ ಇಲ್ಲಿ ನಡೆಯಲಿದೆ.
ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕರಾದ ಮುರುವ ನಡುಮನೆ ಶ್ರೀ ಎಂ. ಮಹಾಬಲ ಭಟ್ ಅವರು ಈ ಉಚಿತ ಶಿಬಿರವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಮಾಣಿಲ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ದಯಾನಂದ ನಾಯಕ್ ಪಿ. ಹಾಗೂ ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ (PPL) ಮಂಗಳೂರು ಘಟಕದ ಸಿಎಂಒ ಮತ್ತು ಪ್ಲಾಂಟ್ ಹೆಡ್ ಆಗಿರುವ ಶ್ರೀ ಷಣ್ಮುಗಂ ಪಿ. ಅವರು ಭಾಗವಹಿಸಿ ಶುಭ ಹಾರೈಸಲಿದ್ದಾರೆ.
ಶಿಬಿರದಲ್ಲಿ ದೊರೆಯುವ ಉಚಿತ ಸೌಲಭ್ಯಗಳು:
ಶಿಬಿರದಲ್ಲಿ ನೇತ್ರ ತಜ್ಞರಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಸೂಕ್ತ ಸಲಹೆಗಳನ್ನು ನೀಡಲಾಗುವುದು. ತಪಾಸಣೆ ವೇಳೆ ಅವಶ್ಯಕತೆ ಕಂಡುಬಂದ ರೋಗಿಗಳಿಗೆ ಮಂಗಳೂರಿನ ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗುವುದು. ಇದರೊಂದಿಗೆ ಸಕ್ಕರೆ ಕಾಯಿಲೆಗೆ (ಶುಗರ್) ರಕ್ತ ಪರೀಕ್ಷೆ ಹಾಗೂ ರಕ್ತದ ಒತ್ತಡದ (ಬಿ.ಪಿ.) ಉಚಿತ ತಪಾಸಣೆಯೂ ಇರಲಿದೆ.
ಮಾಣಿಲ, ಮುರುವ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಆಸಕ್ತ ಸಾರ್ವಜನಿಕರು ಮತ್ತು ಅಶಕ್ತ ರೋಗಿಗಳು ಈ ಉಚಿತ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
