canaratvnews

ಕರಾವಳಿ ಪೊಲೀಸ್‌ ಇಲಾಖೆಗೆ ಭರ್ಜರಿ ಸರ್ಜರಿ ಎಸ್ಪಿ ಹಾಗೂ ಪೊಲೀಸ್‌ ಕಮೀಷನರ್‌ ಎತ್ತಂಗಡಿ

ಮಂಗಳೂರು: ಕರಾವಳಿಯಲ್ಲಿ ನಡೆದ ಕೋಮುಹತ್ಯೆಯನ್ನು ಹತ್ತಿಕ್ಕುವಲ್ಲಿ ವಿಫಲವಾದ ಪೊಲೀಸ್‌ ಇಲಾಖೆಗೆ ರಾಜ್ಯ ಸರ್ಕಾರ ಸರ್ಜರಿ ಮಾಡಿದ್ದು, ಇದರ ಮೊದಲ ಭಾಗವಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯನ್ನು  ವರ್ಗಾವಣೆ ಮಾಡಲಾಗಿದೆ.  ನೂತನ ಪೊಲೀಸ್‌ ಆಯುಕ್ತರಾಗಿ ಸುಧೀರ್‌ ಕುಮಾರ್‌ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಎಸ್ಪಿ ಸ್ಥಾನಕ್ಕೆ ಹಾಲಿ ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್‌ ಕೆ ಅವರನ್ನು ನೇಮಿಸಲಾಗಿದೆ.

2010 ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಸುಧೀರ್‌ ಕುಮಾರ್‌ ರೆಡ್ಡಿ ಅವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಈ ಹಿನ್ನೆಲೆ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆ, ಮಟ್ಕಾ ಸೇರಿದಂತೆ ಕೋಮುದ್ವೇಷವನ್ನು ಹತ್ತಿಕ್ಕಲು ಉಡುಪಿ ಎಸ್ಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸುವಂತೆ ಹಲವು ಕೂಗು ಕೇಳಿಬಂದಿತ್ತು. ಈ ಒತ್ತಡದ ಪರಿಣಾಮ 2014ರ ಬ್ಯಾಚ್‌ನ  ಡಾ. ಅರುಣ್‌ ಕೆ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಉಡುಪಿ ಎಸ್ಪಿಯಾಗಿ 2017ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಹರಿರಾಮ್‌ ಶಂಕರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಮಂಗಳೂರು ನಗರ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಅನುಪಮ್‌ ಅಗ್ರವಾಲ್‌ ಅವರನ್ನು ಆರ್ಥಿಕ ಅಪರಾಧ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಆದರೆ ಎಸ್ಪಿ ಯತೀಶ್‌ ಅವರನ್ನು ಯಾವುದೇ ಹುದ್ದೆ ಸೂಚಿಸಿಲ್ಲ.

Share News
Exit mobile version