ಮಂಗಳೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಇದರ ಮಂಗಳೂರು ವಲಯದ 25ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಮಿನಿ ಹಾಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ SKPA ಜಿಲ್ಲಾಧ್ಯಕ್ಷರಾದ ಶ್ರೀ ನವೀನ್ ರೈ ಪಂಜಳ ಅವರು, “ಹಿರಿಯರು ಕಟ್ಟಿದ ಸಂಘಟನೆಯ ಭದ್ರ ಬುನಾದಿಯನ್ನು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸದಸ್ಯರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ‘ಸಾಂತ್ವನ ವಿಮಾ ಯೋಜನೆ’ಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಮಂಗಳೂರು ವಲಯದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಶಬರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಜತ ಸಂಭ್ರಮದ ಹೊಸ್ತಿಲಲ್ಲಿರುವ ಮಂಗಳೂರು ವಲಯದ ಮುಂಬರುವ ಕಾರ್ಯಕ್ರಮಗಳನ್ನು ಇನ್ನಷ್ಟು ಅದ್ಧೂರಿಯಾಗಿ ಆಯೋಜಿಸಲು ಸರ್ವರ ಸಹಕಾರ ಅಗತ್ಯ ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ: ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಸಂಘದ ವಿದ್ಯಾನಿಧಿಗೆ ಧನಸಹಾಯ ನೀಡಿದ ವಲಯದ ದಾನಿ ಗಳಾದ ಕರುಣಾಕರ ಕಾಣoಗಿ, ಪ್ರಭಾಕರ್ ಕುಲಾಲ್, ಪ್ರಶಾಂತ್ ಶೆಟ್ಟಿ, ನಿಖಿಲ್ ಡಿ ಸೋಜಾ, ನವೀನ್ ಬಂಗೇರ, ಶೈಲೇಶ್ ಕುಮಾರ್, ನವೀನ್ ತಾರೆತೋಟ ಮತ್ತು ಪದ್ಮನಾಭ ಫೋಟೋ ಕಿನ್ನಿಗೋಳಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಇದೇ ವೇಳೆ ನವ ವಿವಾಹಿತರು, ನೂತನ ಸ್ಟುಡಿಯೋ ಮಾಲೀಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಮುಂಬರುವ ಜಿಲ್ಲಾ ಕ್ರೀಡಾಕೂಟದ ಪೋಸ್ಟರ್ ಅನ್ನು ಜಿಲ್ಲಾ ಹಾಗೂ ವಲಯದ ಕ್ರೀಡಾ ಕಾರ್ಯದರ್ಶಿಗಳಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಉಪಾಧ್ಯಕ್ಷ ದೇವರಾಜ್ ಶೆಟ್ಟಿ, ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ದಾಮೋದರ್ ಆಚಾರ್ಯ, ವಿಠಲ್ ಚೌಟ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಲೋಕೇಶ್ ಕುಮಾರ್ ಕೆ., ಗೌರವಾಧ್ಯಕ್ಷ ಮಧು ಮಂಗಳೂರು, ಉಪಾಧ್ಯಕ್ಷ ಶ್ರೀಕಾಂತ್ ತಿಲಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಶೈಲೇಶ್ ಕುಮಾರ್ ಗತ ಸಭೆಯ ವರದಿ, ಪ್ರಧಾನ ಕಾರ್ಯದರ್ಶಿ ನವೀನ್ ಬಂಗೇರ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ನಿಖಿಲ್ ಡಿಸೋಜ ವಾರ್ಷಿಕ ಆದಾಯ-ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದರು. ಛಾಯಾ ಕಾರ್ಯದರ್ಶಿ ಸ್ವೀಟನ್ ಪಿಂಟೋ ಮತ್ತು ಕಾರ್ಯಕಾರಿ ಸಮಿತಿ ಸದಸ್ಯೆ ಬಬಿತಾ ಕಾರ್ಯಕ್ರಮ ನಿರೂಪಿಸಿದರು.



