ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಸರಕಾರಿ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅವರ ಉಪಚಾರಕ್ಕಾಗಿ ಬಂದಿರುವ ಸಾರ್ವಜನಿಕರಿಗೆ ಆಹಾರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರು ಉದ್ಘಾಟಿಸಿ ಮಾತನಾಡಿದರು. “ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾವು ಪ್ರತಿ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸುತ್ತಿದೆ. ಇದರ ಜೊತೆಗೆ ಪ್ರಧಾನಿ ಮೋದೀಜಿಯವರ ಹುಟ್ಟುಹಬ್ಬ ವನ್ನು ಬಡವರ ಹಾಗೂ ರೋಗಿಗಳ ಒಪ್ಪೊತ್ತಿನ ಆಹಾರ ನೀಡುವಂತಹ ಶ್ಲಾಘನೀಯ ಸೇವಾ ಕಾರ್ಯದ ಮೂಲಕ ಆಚರಿಸಿ, ಜನರ ಹೃದಯ ಗೆದ್ದಿದ್ದಾರೆ” ಎಂದು ಅವರು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ಪಸಂಖ್ಯಾತ ಮೋರ್ಚಾ ದ.ಕ. ಜಿಲ್ಲಾ ಅಧ್ಯಕ್ಷರಾದ ಶಾನವಾಜ್ ಹುಸೈನ್ ಅವರು ಮಾತನಾಡಿ, “ಸತತ 12 ವರ್ಷಗಳಿಂದ ಈ ದೇಶದ ಪ್ರಧಾನಮಂತ್ರಿಯಾಗಿ ಅತ್ಯುತ್ತಮ ಆಡಳಿತ ನೀಡಿ ದೇಶವನ್ನು ಮುನ್ನಡೆ ಸುತ್ತಿರುವ ಮೋದೀಜಿಯವರ ಹುಟ್ಟುಹಬ್ಬವು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾದಿಂದ ರೋಗಿಗಳಿಗೆ ಆಹಾರ ಕೊಡುವ ಈ ಸತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ನಂದನ್ ಮಲ್ಯ ಅವರು ಮಾತನಾಡಿ, “ಗುಜರಾತ್‌ನ ಮುಖ್ಯಮಂತ್ರಿ ಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಕಳೆದ 25 ವರ್ಷಗಳಿಂದ ದೇಶಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಶ್ರೇಷ್ಠ ಜನಸೇವಕ ನಮ್ಮ ಪ್ರಧಾನಿ” ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಉಪಾಧ್ಯಕ್ಷರಾದ ರಮೇಶ್ ಹೆಗ್ಡೆ, ಲಲ್ಲೇಶ್ ಹಾಗೂ ಪ್ರವೀಣ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷರಾದ ರಫೀಕ್ ದರ್ಬೆ, ಫ್ರೆಡ್ರಿಕ್ ಪೌಲ್, ಪದಾಧಿಕಾರಿಗಳಾದ ಮಹಮ್ಮದ್ ಶಾಕೀರ್ ಕಣ್ಣೂರ್, ಸುಪ್ರಿಯಾ ಕ್ರಿಸ್ತಬೆಲ್, ಜೊಯಿಲೆಸ್ ಡಿ.ಸೋಜಾ, ಅಶ್ರಫ್ ಹರೇಕಳ, ಹರ್ಷದ್ ಪೋಪಿ, ಸಿದ್ದೀಕ್ ತಲಪಾಡಿ, ಎಂ.ಸಲೀಂ ಬೆಂಗ್ರೆ, ಎ. ಆರ್. ಬೋಲರ್, ರಹಮತ್ ಅಲಿ, ಟೀನಾ ಪಿರೇರ, ಹ್ಯಾರೀಸ್ ಸುರಿಬೈಲ್, ಫ್ರೆಡ್ರಿಕ್, ನೆಲ್ಸನ್, ದೀಪಕ್ ಡಿ ಸೋಜಾ, ಹಮೀಡ್ ಕುಲೂರ್, ಸಾದಿಕ್, ಸಾಲಿ, ಅಬ್ದುಲ್ ಖಾದರ್, ಸುಶೀಲ್ ಮತ್ತಿತರರು ಉಪಸ್ಥಿತರಿದ್ದರು.
ಎಂ ಫ್ರೆಂಡ್ಸ್’ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಹನೀಫ್ ಹಾಜಿ, ರಶೀದ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರೆ, ಪದಾಧಿಕಾರಿಗಳಾದ ಇಸಾಕ್ ಶೇಕ್ (ವಕೀಲರು) ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎ.ಕೆ. ಜಮಾಲ್ ಎಲ್ಲರನ್ನೂ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಮಹಮ್ಮದ್ ಅಸ್ಗರ್ ಕಾರ್ಯಕ್ರಮವನ್ನು ನಿರೂಪಿಸಿದರು.
