LATEST NEWS

‘ಕುಡ್ಲದ ಪಿಲಿಪರ್ಬ-2026’ಕ್ಕೆ ಚಾಲನೆ: ಕೇಂದ್ರ ಮೈದಾನದಲ್ಲಿ ನೆರವೇರಿತು ಚಪ್ಪರ ಮುಹೂರ್ತ!

ಮಂಗಳೂರು: ತುಳುನಾಡಿನ ಹೆಮ್ಮೆಯ ಕಲೆಯಾದ ಹುಲಿವೇಷಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ಐದನೇ ವರ್ಷದ “ಕುಡ್ಲದ ಪಿಲಿ ಪರ್ಬ-2026” ರಂಗುರಂಗಿನ ಸಿದ್ಧತೆಗಳೊಂದಿಗೆ ಆರಂಭಗೊಂಡಿದೆ. ಮಂಗಳೂರಿನ ಕೇಂದ್ರ ಮೈದಾನದಲ್ಲಿ ಭಾನುವಾರ ಈ ಬಾರಿಯ ಪಿಲಿಪರ್ಬದ ಚಪ್ಪರ ಮುಹೂರ್ತ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು.

ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸಾಗುತ್ತಿರುವ **’ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ’**ದ ಅಡಿಯಲ್ಲಿ ಈ ಭವ್ಯ ಪಿಲಿಪರ್ಬ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.

ಅಕ್ಟೋಬರ್ 18ರಂದು 5ನೇ ವರ್ಷದ ಪಿಲಿಪರ್ಬ: ಶಾಸಕ ವೇದವ್ಯಾಸ ಕಾಮತ್

ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, “ದಸರಾ ಸಂದರ್ಭ ಬಂತೆಂದರೆ ಇಡೀ ತುಳುನಾಡಿನಾದ್ಯಂತ ಹುಲಿವೇಷದ ನಾದ, ಸಂಭ್ರಮ ಮನೆ ಮಾಡಿರುತ್ತದೆ. ನಮ್ಮ ಮಣ್ಣಿನ ಹೆಮ್ಮೆಯ ಕಲೆಯಾದ ಹುಲಿವೇಷವು ಇಂದು ಕೇವಲ ತುಳುನಾಡಿಗೆ ಮಾತ್ರ ಸೀಮಿತವಾಗಿರದೆ, ದೇಶ-ವಿದೇಶಗಳಲ್ಲೂ ಅಪಾರ ಜನಪ್ರಿಯತೆ ಗಳಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ,” ಎಂದರು.

ಮುಂದುವರಿದು ಮಾತನಾಡಿದ ಅವರು, “ಈ ಜನಪ್ರಿಯತೆಯನ್ನು ಉಳಿಸಿ, ಕಲೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇದೇ ಅಕ್ಟೋಬರ್ 18ರ ಭಾನುವಾರದಂದು ಐದನೇ ವರ್ಷದ ‘ಕುಡ್ಲದ ಪಿಲಿಪರ್ಬ’ ನಡೆಯಲಿದೆ. ಇದು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಈ ಕಲೆಯನ್ನು ಪರಿಚಯಿಸುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಹುಲಿವೇಷ ತಂಡಗಳಿಗೂ ಶುಭವಾಗಲಿ,” ಎಂದು ಹಾರೈಸಿದರು. ಅಲ್ಲದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹುಲಿವೇಷಧಾರಿಗಳನ್ನು ಪ್ರೋತ್ಸಾಹಿಸುವಂತೆ ಪ್ರೀತಿಯ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಮಲಾಕ್ಷ ಬಜಿಲಕೇರಿ, ಕಿರಣ್ ಶೆಣೈ, ನರೇಶ್ ಪ್ರಭು, ಜಗದೀಶ್ ಕದ್ರಿ, ಲಲಿತ್ ಮೆಂಡನ್ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

Share News