ಬೆಂಗಳೂರು :ಬ್ರಹ್ಮಶ್ರೀ ನಾರಾಯಣ ಗುರುಗಳ ಪಾವನ ಸನ್ನಿಧಿ, ಸಮಾನತೆ ಮತ್ತು ಸಂಸ್ಕೃತಿಯ ಸಂಗಮ ಕ್ಷೇತ್ರವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11 ರಿಂದ 21 ರವರೆಗೆ ನಡೆಯಲಿರುವ ಐತಿಹಾಸಿಕ ‘ಮಂಗಳೂರು ದಸರಾ ಮಹೋತ್ಸವ’ದ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕ್ಷೇತ್ರದ ಗಣ್ಯರ ನಿಯೋಗವು, ದಸರಾ ಮಹೋತ್ಸವದ ಅಧಿಕೃತ ಆಹ್ವಾನ ಪತ್ರಿಕೆಯನ್ನು ನೀಡಿ, ಕ್ಷೇತ್ರದ ಅನುಗ್ರಹ ಪ್ರಸಾದದೊಂದಿಗೆ ಗೌರವಿಸಿತು.

ಆಹ್ವಾನವನ್ನು ಅತ್ಯಂತ ಸಂತಸದಿಂದ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿಯ ಸಂಸ್ಕೃತಿಯನ್ನು ಶ್ಲಾಘಿಸಿದರು. “ಕುದ್ರೋಳಿ ಕ್ಷೇತ್ರಕ್ಕೆ ಬರುವುದೇ ಒಂದು ವಿಶೇಷ ಅನುಭವ. ನಾರಾಯಣ ಗುರುಗಳ ಉನ್ನತ ಆಶಯಗಳು ಹಾಗೂ ಕರಾವಳಿಯ ಜನತೆಯ ಸಂಸ್ಕೃತಿಯ ಸಂಕೇತವಾಗಿರುವ ಈ ಮಹೋತ್ಸವದಲ್ಲಿ ಭಾಗಿಯಾಗುವುದು ನನಗೆ ಹೆಮ್ಮೆಯ ವಿಷಯ” ಎಂದು ಸಿಎಂ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜೈರಾಜ್ ಹೆಚ್. ಸೋಮಸುಂದರಂ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ವೇದಕುಮಾರ್, ಲೀಲಾಕ್ಷ ಬಿ. ಕರ್ಕೇರ, ಸೂರ್ಯಕಾಂತ್ ಜೆ. ಸುವರ್ಣ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಉಪಾಧ್ಯಕ್ಷರಾದ ಪ್ರಭಾಕರ ಬಂಗೇರ, ಕೋಶಾಧಿಕಾರಿ ಯೋಗೀಶ್ ಕುಮಾರ್ ಮೂಲ್ಕಿ ಹಾಗೂ ಕಾರವಾರದ ನ್ಯಾಯವಾದಿ ಜಿ.ಟಿ.ನಾಯ್ಕ ಉಪಸ್ಥಿತರಿದ್ದರು.


