LATEST NEWS

ಪುತ್ತೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ ಸ್ವಾಗತಾರ್ಹ: ಶಾಶ್ವತ ಸ್ಟಾಪ್‌ಗೆ ಸಂಸದರ ಗ್ರೀನ್ ಸಿಗ್ನಲ್, ವೇಳಾಪಟ್ಟಿ ಬದಲಾವಣೆಗೆ ಎಂಎಲ್ಸಿ ಕಿಶೋರ್ ಕುಮಾರ್ ಆಗ್ರಹ

ಪುತ್ತೂರು: ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪುತ್ತೂರಿನಲ್ಲಿ ತಾತ್ಕಾಲಿಕ (ಟ್ರಯಲ್ ರನ್) ನಿಲುಗಡೆ ಒದಗಿಸಿರುವುದು ಹರ್ಷದ ವಿಚಾರವಾಗಿದ್ದು, ಈ ನಿಲುಗಡೆಯನ್ನು ಶಾಶ್ವತಗೊಳಿಸುವ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಲಾಗಿದೆ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ತಿಳಿಸಿದ್ದಾರೆ.


ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿಲುಗಡೆಗಾಗಿ ಶ್ರಮಿಸಿದ ರೈಲ್ವೆ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಮುಂದಿನ ಆಗಬೇಕಾದ ಬದಲಾವಣೆಗಳ ಕುರಿತು ಒತ್ತಾಯಿಸಿದ್ದಾರೆ.

ಹೋರಾಟಗಾರರಿಗೆ ಸಂದ ಜಯ:
“ಇತ್ತೀಚೆಗೆ ಪುತ್ತೂರು-ಸುಬ್ರಹ್ಮಣ್ಯ ಮಾರ್ಗದ ರೈಲು ಪ್ರಯಾಣಿಕರು, ಪತ್ರಕರ್ತರು ಹಾಗೂ ರೈಲ್ವೆ ಹೋರಾಟಗಾರರು ನನ್ನೊಂದಿಗೆ ವರ್ಚುವಲ್ ಸಭೆ ನಡೆಸಿ, ನಮ್ಮ ಭಾಗದ ರೈಲ್ವೆ ಸಮಸ್ಯೆಗಳು ಹಾಗೂ ವಂದೇ ಭಾರತ್ ನಿಲುಗಡೆಯ ಅಗತ್ಯತೆಯ ಕುರಿತು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಈ ಕಾಳಜಿ, ಒದಗಿಸಿದ ನಿಖರ ಮಾಹಿತಿ ಹಾಗೂ ನಿರಂತರ ಹೋರಾಟವೇ ನಮ್ಮೆಲ್ಲಾ ಪ್ರಯತ್ನಗಳಿಗೆ ನಾಂದಿಯಾಯಿತು. ಈ ಸಭೆಯ ಬಳಿಕ ನಾನು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೆ. ನಮ್ಮೆಲ್ಲರ ಈ ಶ್ರಮದ ಫಲವಾಗಿ ಇದೀಗ ವಂದೇ ಭಾರತ್ ರೈಲಿಗೆ ತಾತ್ಕಾಲಿಕವಾಗಿ ಪುತ್ತೂರಿನಲ್ಲಿ ನಿಲುಗಡೆ ಸಿಕ್ಕಿರುವುದು ಅತ್ಯಂತ ಸಂತೋಷದ ವಿಚಾರ” ಎಂದು ಶಾಸಕರು ತಿಳಿಸಿದ್ದಾರೆ.

ವೇಳಾಪಟ್ಟಿ ಬದಲಾವಣೆಗೆ ಆಗ್ರಹ:
“ಪುತ್ತೂರಿನಲ್ಲಿ ನಿಲುಗಡೆ ಸಿಗುತ್ತಿರುವುದು ಸ್ವಾಗತಾರ್ಹವಾದರೂ, ಪ್ರಯಾಣಿಕರ ಗರಿಷ್ಠ ಅನುಕೂಲಕ್ಕಾಗಿ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲೇಬೇಕಿದೆ. ಪ್ರಸ್ತುತ ರೈಲು ಬೆಳಿಗ್ಗೆ ಬೆಂಗಳೂರಿನಿಂದ ಹೊರಡುತ್ತಿದೆ. ಇದರ ಬದಲಾಗಿ, ಕರಾವಳಿಯಿಂದ ರೈಲು ಬೆಳಿಗ್ಗೆ ಬೇಗ ಹೊರಟು ಮಧ್ಯಾಹ್ನ ವಾಪಸ್ ಬರುವಂತೆ ವೇಳಾಪಟ್ಟಿ ಬದಲಾಗಬೇಕು. ಇದರಿಂದ ಬೆಂಗಳೂರಿನಲ್ಲಿರುವ ನಮ್ಮ ಐಟಿ-ಬಿಟಿ ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ವಾರಾಂತ್ಯದಲ್ಲಿ ಊರಿಗೆ ಬರುವ ಜನರಿಗೆ ಬಹಳ ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೆ, ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಲಿದೆ,” ಎಂದು ಅವರು ಪ್ರತಿಪಾದಿಸಿದ್ದಾರೆ.

ಶಾಶ್ವತ ನಿಲುಗಡೆಗೆ ಸಂಸದರ ಗ್ರೀನ್ ಸಿಗ್ನಲ್:
“ನಿನ್ನೆ ನಡೆದ ‘ಬಳ್ಳಾರಿ ಚಲೋ’ ಯಾತ್ರೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಈ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇನೆ. ಪುತ್ತೂರಿನಲ್ಲಿ ವಂದೇ ಭಾರತ್ ಶಾಶ್ವತ ನಿಲುಗಡೆ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಮಯ ಬದಲಾವಣೆ ಹಾಗೂ ಪುತ್ತೂರು ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಯ ಕುರಿತು ತಕ್ಷಣವೇ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಈ ಚರ್ಚೆಯ ವೇಳೆ, ಸಂಸದರು ಪುತ್ತೂರಿನಲ್ಲಿ ವಂದೇ ಭಾರತ್ ‘ಶಾಶ್ವತ ನಿಲುಗಡೆಗೆ’ ಅಧಿಕೃತವಾಗಿ “ಗ್ರೀನ್ ಸಿಗ್ನಲ್” ಕೊಟ್ಟಿದ್ದಾರೆ. ನಮ್ಮ ಕರಾವಳಿಯ ಜನತೆಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು,” ಎಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News