ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚನೆಯಂತೆ ಮಂಗಳೂರು– ಉಡುಪಿ ನಡುವೆ ಮೆಟ್ರೊ ರೈಲು ಯೋಜನೆ ಅನುಷ್ಠಾನ ಸಂಬಂಧ ಕಾರ್ಯಸಾಧ್ಯತೆ ವರದಿ ನೀಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶವು ವಿವಿಧ ಇಲಾಖೆಗಳು, ಸಂಘ–ಸಂಸ್ಥೆಗಳಿಗೆ ಪತ್ರ ಬರೆದಿದೆ.
ಮಂಗಳೂರು– ಉಡುಪಿ ನಡುವೆ ಮೆಟ್ರೊ ರೈಲು ಯೋಜನೆಯು ಕರಾವಳಿಯ ಆರ್ಥಿಕತೆ ಬೆಳವಣಿಗೆ, ಜನರ ಜೀವನ ಮಟ್ಟದ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಮಂಗಳೂರು ಮತ್ತು ಉಡುಪಿ ನಗರಗಳ ನಡುವೆ ಮೆಟ್ರೊ ರೈಲು ಯೋಜನೆ ಬಗ್ಗೆ ಕಾರ್ಯಸಾಧ್ಯತಾ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.
ವಾಣಿಜ್ಯ ನಗರವಾಗಿರುವ ಮಂಗಳೂರಿನಲ್ಲಿ ಇರುವ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸಂಸ್ಥೆಗಳು, ಕಡಲ ಕಿನಾರೆ ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಮೆಟ್ರೊ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವರು ತಿಳಿಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಪತ್ರವನ್ನು ಜಿಲ್ಲಾಧಿಕಾರಿ ಪರವಾಗಿ ನಗರಾಭಿವೃದ್ಧಿ ಕೋಶವು, ಎನ್‌ಎಂಪಿಎ, ಎಂಆರ್‌ಪಿಎಲ್, ನಗರ ಪೊಲೀಸ್ ಕಮಿಷನರ್, ಎನ್‌ಐಟಿಕೆ, ಡಿಎಫ್‌ಒ, ಸಾರಿಗೆ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯನಿರ್ವಹಣಾಧಿಕಾರಿ, ಕೆನರಾ ವಾಣಿಜ್ಯೋದ್ಯಮ ಕೈಗಾರಿಕಾ ಸಂಘಕ್ಕೆ ಕಳುಹಿಸಿದೆ.