LATEST NEWS

ಜೈಲ್ ಜಾಮರ್ ಸಾರ್ವಜನಿಕರಿಗೋ? ಖೈದಿಗಳಿಗೋ? :- ಶಾಸಕ ಕಾಮತ್ ಪ್ರಶ್ನೆ

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಪೊಲೀಸರು ದಾಳಿ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳಿಂದ ಒಟ್ಟು 10 ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡಿರುವುದು, ಜೈಲಿನೊಳಗೆ ಇಂದಿಗೂ ನೆಟ್ವರ್ಕ್ ಸಿಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಜೈಲ್ ಜಾಮರ್ ಹೊರಗಿನ ಜನರಿಗೆ ಮಾತ್ರ ಸಮಸ್ಯೆ ಉಂಟು ಮಾಡಿದ್ದು ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ತೋರಿಸುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಇಲ್ಲಿನ ಜಾಮರ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸುತ್ತಮುತ್ತಲಿನ ಶಾಲಾ ಕಾಲೇಜು, ಅಂಗಡಿ ಮುಗ್ಗಟ್ಟುಗಳು, ಸರ್ಕಾರಿ ಕಚೇರಿಗಳು, ನ್ಯಾಯಾಲಯ ಸೇರಿದಂತೆ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಆದರೆ ಜೈಲೊಳಗೆ ಮಾತ್ರ ನೆಟ್ವರ್ಕ್ ಸಿಗುತ್ತಿದ್ದು, ಖೈದಿಗಳು ರಾಜಾರೋಷವಾಗಿ ಫೋನ್ ಬಳಸುತ್ತಿರುವುದು ಇಡೀ ವ್ಯವಸ್ಥೆಯನ್ನು ಗೇಲಿ ಮಾಡುವಂತಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಜಾಮರ್ ಅಳವಡಿಸಿದ್ದೇವೆ ಎನ್ನುವವರು, ಸಾರ್ವಜನಿಕರಿಗೆ ತೊಂದರೆ ಕೊಟ್ಟು ಜಾಮರ್ ಅಳವಡಿಸಿ ಎಂದು ಕೋರ್ಟ್ ಹೇಳಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಲಿ ಎಂದರು.

ಈ ಬಗ್ಗೆ ಜನರ ಪರವಾಗಿ ಸಂಬಂಧಪಟ್ಟ ಇಲಾಖೆಗೆ ಹಲವು ಮನವಿ ಮಾಡಿದ್ದೇನೆ. ಜೈಲಿನ ಮುಂದೆ ಪ್ರತಿಭಟನೆ ಮಾಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ, ಗೃಹ ಸಚಿವರಿಗೆ ಮಾತ್ರವಲ್ಲದೇ, ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಸ್ಯೆ ಬಗೆಹರಿಸಿಲ್ಲ. ಬದಲಿಗೆ ದೆಹಲಿ ಮುಂಬಯಿಯಿಂದ ತಜ್ಞರ ತಂಡ ಕರೆಸುತ್ತೇವೆ, ಸಮಸ್ಯೆ ಬಗೆಹರಿಸುತ್ತೇವೆ ಎಂದು ಪೊಳ್ಳು ಭರವಸೆ ನೀಡಿ ಕೈ ತೊಳಿದುಕೊಂಡಿತು. ಮಾತೆತ್ತಿದರೆ ಆರ್ ಎಸ್ ಎಸ್ ವಿರುದ್ಧ ಮಾತನಾಡುವ ಗೃಹ ಸಚಿವರು ತಮ್ಮ ಇಲಾಖೆಯ ಈ ವೈಫಲ್ಯದ ಬಗ್ಗೆ ಚಕಾರ ಎತ್ತುತ್ತಿಲ್ಲ. ಇನ್ನಾದರೂ ಸಮಸ್ಯೆ ಬಗೆಹರಿಸಿ ಜವಾಬ್ದಾರಿ ಮೆರೆಯಲಿ ಎಂದರು.

Share News