COMMUNITY NEWSLATEST NEWS

ವಾಮಂಜೂರಿನಲ್ಲಿ ನ. 8ರಂದು 6,000ಕ್ಕೂ ಹೆಚ್ಚು ಮಕ್ಕಳ ಬೃಹತ್ ಸಮಾವೇಶ: ಗಮನ ಸೆಳೆಯಲಿದೆ 125 ಸಂತರ ಭವ್ಯ ಮೆರವಣಿಗೆ

ಮಂಗಳೂರು : ಮಂಗಳೂರು ರೋಮನ್ ಕ್ಯಾಥೊಲಿಕ್ ಧರ್ಮಕ್ಷೇತ್ರದ ವತಿಯಿಂದ ‘ಮಕ್ಕಳ ವರ್ಷ 2026’ರ ಆಚರಣೆಯ ಅಂಗವಾಗಿ, ಧರ್ಮಕ್ಷೇತ್ರದ ಇತಿಹಾಸದಲ್ಲೇ ಅತಿದೊಡ್ಡ ಮಕ್ಕಳ ಸಮಾವೇಶವಾದ ‘ನಿನಾದ್ – ಭುರ್ಗ್ಯಾಂಲೆಂ ಫೆಸ್ತ್ 2K26’ (ಮಕ್ಕಳ ಹಬ್ಬ) ನವೆಂಬರ್ 8, 2026 ರಂದು ಭಾನುವಾರ ನಡೆಯಲಿದೆ. ವಾಮಂಜೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (SJEC) ಆವರಣದಲ್ಲಿ ಬೆಳಗ್ಗೆ 8:30 ರಿಂದ ಸಂಜೆ 4:00 ರವರೆಗೆ ಈ ಸಮಾವೇಶ ನಡೆಯಲಿದೆ. 12 ವಲಯಗಳ 125 ಚರ್ಚ್‌ಗಳಿಂದ 5 ರಿಂದ 10 ನೇ ತರಗತಿಯ 6,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.


ಮಕ್ಕಳ ಹಬ್ಬ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಸಮ್ಮಿಲನ: ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಕ್ಕಳಿಗೆ ವಿಶೇಷ ಸಂದೇಶ ನೀಡಲಿದ್ದಾರೆ. “ಆಮ್ಚಿಂ ಭುರ್ಗಿಂಬಾಳಾಂ, ದೆವಾಚ್ಯಾ ರಾಜಾಚಿo ಫಳಾಂ” (“ನಮ್ಮ ಪ್ರೀತಿಯ ಮಕ್ಕಳು, ದೇವರ ರಾಜ್ಯದ ಫಲಗಳು”) ಎಂಬ ಅಧಿಕೃತ ಧ್ಯೇಯವಾಕ್ಯದಡಿ ನಡೆಯಲಿರುವ ಈ ಸಮಾವೇಶವು, ದೇವರ ಅಮೂಲ್ಯ ಕೊಡುಗೆಯಾದ ಮಕ್ಕಳನ್ನು ಸಂಭ್ರಮಿಸುವ ವೇದಿಕೆಯಾಗಿದೆ. ಮಕ್ಕಳಲ್ಲಿ ಕ್ರಿಸ್ತನ ಪ್ರೀತಿ ಹಾಗೂ ಬಲಿಷ್ಠ ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರೇರೇಪಿಸುವುದು ಮತ್ತು ವಿವಿಧ ಚರ್ಚ್‌ಗಳ ಮಕ್ಕಳ ನಡುವೆ ಸಹೋದರತ್ವ, ಹಂಚುವಿಕೆ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ.

125 ಸಂತರು ಮತ್ತು ರಕ್ಷಣೆಯ ಇತಿಹಾಸದ ಭವ್ಯ ಮೆರವಣಿಗೆ: ಕಾರ್ಯಕ್ರಮವು ಬೆಳಗ್ಗೆ 8:30 ಕ್ಕೆ ವಾಮಂಜೂರು ಚರ್ಚ್ ಸಭಾಂಗಣದಲ್ಲಿ ಆರಂಭವಾಗಲಿದ್ದು, 9:30 ಕ್ಕೆ ಬೃಹತ್ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ 125 ಚರ್ಚ್‌ಗಳನ್ನು ಪ್ರತಿನಿಧಿಸುವ 125 ಪಾಲಕ ಸಂತರ ವೇಷಧಾರಿ ಮಕ್ಕಳ ಭವ್ಯ ನಡಿಗೆ ವಿಶೇಷ ಆಕರ್ಷಣೆಯಾಗಲಿದೆ. ಇದರೊಂದಿಗೆ 12 ವಲಯಗಳ ವತಿಯಿಂದ ಸೃಷ್ಟಿಯ ಆರಂಭದಿಂದ ‘ಪಂಚಾಶತ್ತಮ ದಿನ’ದವರೆಗಿನ ಬೈಬಲ್ ಆಧಾರಿತ ‘ರಕ್ಷಣೆಯ ಇತಿಹಾಸ’ವನ್ನು ಸಾರುವ ಸ್ತಬ್ಧಚಿತ್ರಗಳ (Tableaux) ಪ್ರದರ್ಶನವೂ ಇರಲಿದೆ.

ವಿಶೇಷ ಬಲಿಪೂಜೆ ಮತ್ತು ‘ಜೀವಂತ ಪರಮಪ್ರಸಾದ, ಪಾನಪಾತ್ರೆ ಮತ್ತು ಶಿಲುಬೆ’ಯ ಡ್ರೋನ್ ಸೆರೆ: ಕಾರ್ಯಕ್ರಮದ ಅಂಗವಾಗಿ 100 ಮಕ್ಕಳ ಗಾಯನ ಮಂಡಳಿಯ ಸಹಕಾರದೊಂದಿಗೆ ಕೃತಜ್ಞತಾ ಪವಿತ್ರ ಬಲಿಪೂಜೆ ಬೆಳಗ್ಗೆ 11:40 ಕ್ಕೆ ನೆರವೇರಲಿದೆ. ಮಧ್ಯಾಹ್ನದ ಬಳಿಕ ಮಕ್ಕಳು ಮೈದಾನದಲ್ಲಿ ಒಗ್ಗೂಡಿ ‘ಜೀವಂತ ಪರಮಪ್ರಸಾದ, ಪಾನಪಾತ್ರೆ ಮತ್ತು ಶಿಲುಬೆ’ಯ ವಿಶಾಲ ಆಕಾರವನ್ನು ರಚಿಸಲಿದ್ದು, ಇದನ್ನು ಡ್ರೋನ್ ಮೂಲಕ ಸೆರೆಹಿಡಿಯಲಾಗುವುದು. ಸಮಾವೇಶದಲ್ಲಿ ಪ್ರೇರಣಾದಾಯಿ ಆಧ್ಯಾತ್ಮಿಕ ಮಾತುಕತೆ, ‘ಡಿಜಿಟಲ್ ಯುಗದಲ್ಲಿ ವಿಶ್ವಾಸ’ ಕುರಿತ ಡಾಕ್ಯುಫಿಲ್ಮ್ (Docufilm) ಪ್ರದರ್ಶನ ಮತ್ತು ಯುವ ಬ್ಯಾಂಡ್‌ಗಳಿಂದ ಗಾಸ್ಪೆಲ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.


ಇನ್‌ಸ್ಟಾಗ್ರಾಮ್ ಸ್ಪರ್ಧೆ ಮತ್ತು ಸುರಕ್ಷತಾ ವ್ಯವಸ್ಥೆ: ಕಾರ್ಯಕ್ರಮದ ಪ್ರಚಾರಾರ್ಥವಾಗಿ ಅಧಿಕೃತ ಥೀಮ್ ಹಾಡಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಒಟ್ಟು ₹17,500 ನಗದು ಬಹುಮಾನವನ್ನು ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆಗಾಗಿ ತುರ್ತು ಸಹಾಯವಾಣಿ ಸಂಖ್ಯೆ (+918970353016), ವೈದ್ಯಕೀಯ ತಂಡ ಮತ್ತು ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಮಾವೇಶವು ಸಂಜೆ 4:00 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಮಂಗಳೂರು ಧರ್ಮಕ್ಷೇತ್ರದ ಯೂಟ್ಯೂಬ್‌ನಲ್ಲಿ ನೇರಪ್ರಸಾರವಾಗಲಿದೆ.

Share News