• Home  
  • ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ ಎನ್‌ಐಎ ತನಿಖೆಗೆ ಒಪ್ಪಿಸಿರುವುದು ದೇಶವಿರೋಧಿ ಶಕ್ತಿಗಳನ್ನು ಬೇರು ಸಮೇತ ಕಿತ್ತೊಗೆಯಲು ಮೊದಲ ಹೆಜ್ಜೆ: ಸಂಸದ ಕ್ಯಾ. ಚೌಟ
- DAKSHINA KANNADA

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ ಎನ್‌ಐಎ ತನಿಖೆಗೆ ಒಪ್ಪಿಸಿರುವುದು ದೇಶವಿರೋಧಿ ಶಕ್ತಿಗಳನ್ನು ಬೇರು ಸಮೇತ ಕಿತ್ತೊಗೆಯಲು ಮೊದಲ ಹೆಜ್ಜೆ: ಸಂಸದ ಕ್ಯಾ. ಚೌಟ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಭಾರೀ ಸಂಚಲನ ಉಂಟುಮಾಡಿದ್ದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಿರುವುದಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸ್ವಾಗತಿಸಿದ್ದಾರೆ.

ಸುಹಾಸ್‌ ಶೆಟ್ಟಿ ಅವರನ್ನು ಬಜಪೆಯಲ್ಲಿ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದ ಬೆನ್ನಲ್ಲೇ ಅಂದರೆ ಮೇ 2ರಂದು ಕ್ಯಾ. ಚೌಟ ಅವರು, ಈ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಇದರ ಹಿಂದೆ ಇಸ್ಲಾಮಿಕ್‌ ಮೂಲಭೂತವಾದಿಗಳ ಕೈವಾಡದ ಬಗ್ಗೆ ಬಲವಾದ ಶಂಕೆಯಿರುವ ಕಾರಣ ಅದನ್ನು ತುರ್ತಾಗಿ ಎನ್‌ಐಎ ಸಂಸ್ಥೆಗೆ ವಹಿಸುವಂತೆ ಕೋರಿ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರಿಗೆ ಸುದೀರ್ಘ ಪತ್ರ ಬರೆದಿದ್ದರು. ಈ ಪತ್ರ ಬರೆದು ಒಂದು ತಿಂಗಳಾಗುತ್ತಿದ್ದಂತೆ ಸುಹಾಸ್‌ ಶೆಟ್ಟಿ ಹತ್ಯೆಯ ಗಂಭೀರತೆ ಹಾಗೂ ಅದರ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆ ಕೈವಾಡವಿರುವ ಅನುಮಾನದ ಮೇಲೆ ಇಡೀ ಪ್ರಕರಣವನ್ನು ಈಗ ಕೇಂದ್ರ ತನಿಖಾ ಸಂಸ್ಥೆಯಾದ ಎನ್‌ಐಎಗೆ ವಹಿಸಿರುವುದಕ್ಕೆ ಕ್ಯಾ. ಚೌಟ ಅವರು ಗೃಹ ಸಚಿವ ಅಮಿತ್‌ ಶಾ ಹಾಗೂ ಗೃಹ ಸಚಿವಾಲಯಕ್ಕೆ ಧನ್ಯವಾದವನ್ನು ಸಲ್ಲಿಸಿದ್ದಾರೆ.

ಸುಹಾಸ್‌ ಹತ್ಯೆ ಕೇಸ್‌ನ್ನು ಎನ್‌ಐಎಗೆ ವಹಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು,’ಸುಹಾಸ್‌ ಶೆಟ್ಟಿ ಅವರ ಹತ್ಯೆಯಾದ ಬೆನ್ನಲ್ಲೇ ಈ ಪ್ರಕರಣವನ್ನು ಎನ್‌ಐಎ ತನಿಖಾ ಸಂಸ್ಥೆಗೇ ವಹಿಸಬೇಕೆಂದು ನಾನು ಒತ್ತಾಯಿಸಿದ್ದೆ. ಆ ಕೂಡಲೇ ಗೃಹ ಸಚಿವರಾದ ಅಮಿತ್‌ ಶಾ ಅವರಿಗೂ ಪತ್ರ ಬರೆದು, ಸುಹಾಸ್‌ ಹತ್ಯೆಯಲ್ಲಿ ಕೇವಲ ಅಪರಾಧಿಗಳು ಮಾತ್ರವಲ್ಲದೆ ಅವರಿಗೆ ಬೆಂಬಲ ನೀಡಿದ ಮತ್ತು ಹಣಕಾಸು ನೆರವು ನೀಡಿದ ಎಲ್ಲರನ್ನು ತ್ವರಿತವಾಗಿ ನ್ಯಾಯದ ಮುಂದೆ ತರಬೇಕಿದೆ. ಅಲ್ಲದೆ, ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಕೈವಾಡದ ಸಾಧ್ಯತೆ ಇರುವುದರಿಂದ ಈ ಕುರಿತು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅತ್ಯಗತ್ಯ. ಹೀಗಿರುವಾಗ, ಸುಹಾಸ್‌ ಹತ್ಯೆ ಹಿಂದೆ ಇಸ್ಲಾಮಿಕ್‌ ಮೂಲಭೂತವಾದಿಗಳ ಕೈವಾಡವನ್ನು ಬಯಲಿಗೆಳೆಯಬೇಕಾದರೆ ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವಂತೆ ಗೃಹ ಸಚಿವರಿಗೆ ಬರೆದಿದ್ದ ಪತ್ರದಲ್ಲಿ ಆಗ್ರಹಿಸಿದ್ದೆ’ ಎಂದಿದ್ದಾರೆ.

ಇದೀಗ ಸುಹಾಸ್‌ ಹತ್ಯೆಯನ್ನು ಎನ್‌ಐಎಗೆ ವಹಿಸಿರುವ ಕಾರಣ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಮೂಲಭೂತವಾದಿ, ರಾಷ್ಟ್ರ ವಿರೋಧಿ ಮತ್ತು ಜಿಹಾದಿ ಮಾನಸಿಕತೆಯ ಶಕ್ತಿಗಳು ಪಿಎಫ್‌ಐನಂಥ ನಿಷೇಧಿತ ಸಂಘಟನೆಗಳ ಜತೆ ಸ್ಲೀಪರ್‌ ಸೆಲ್‌ನಂತೆ ಹೇಗೆ ಕೆಲಸ ಮಾಡುತ್ತಿವೆ ಎನ್ನುವುದು ಬೆಳಕಿಗೆ ಬರಲಿದೆ. ಆ ಮೂಲಕ ಗೃಹಸಚಿವಾಲಯವು ಸಕಾಲದಲ್ಲಿ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿರುವುದು ದಕ್ಷಿಣ ಕನ್ನಡದಲ್ಲಿ ದೇಶವಿರೋಧಿ ಶಕ್ತಿಗಳನ್ನು ಬೇರು ಸಮೇತ ಕಿತ್ತೊಗೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪ್ರಕರಣವನ್ನು ಕೂಡ ಎನ್‌ಐಎಗೆ ವಹಿಸಿದ ಕಾರಣ ಇಲ್ಲಿವರೆಗೆ ಪಿಎಫ್‌ಐ ಸಂಘಟನೆಯ ಹಲವರನ್ನು ಜೈಲಿಗೆ ಅಟ್ಟುವುದಕ್ಕೆ ಸಾಧ್ಯವಾಗಿದೆ. ಪ್ರವೀಣ್‌ ಕೊಲೆಯ ಹಿಂದೆ ಈ ಜಿಹಾದ್‌ ಮೂಲಭೂತವಾದಿಗಳು ಹಾಗೂ ಸ್ಲೀಪರ್‌ ಸೆಲ್‌ಗಳು ಹೇಗೆಲ್ಲ ವ್ಯವಸ್ಥಿತ ಸಂಚು ರೂಪಿಸಿ ಹಣದ ಫಂಡಿಂಗ್‌ ಮಾಡಿಸಿರುವ ವಿಚಾರ ತನಿಖೆಯಿಂದ ಗೊತ್ತಾಗಿದೆ. ಹೀಗಿರುವಾಗ, ಸುಹಾಸ್‌ ಶೆಟ್ಟಿ ಹತ್ಯೆಯನ್ನು ಕೂಡ ಇದೀಗ ಎನ್‌ಐಎಗೆ ವಹಿಸಿರುವ ಕಾರಣ ಇಸ್ಲಾಮಿಕ್‌ ಮೂಲಭೂತವಾದಿ ಶಕ್ತಿಗಳ ನೆಟ್‌ವರ್ಕ್‌, ಆರ್ಥಿಕವಾಗಿ ಯಾರೆಲ್ಲ ಸಹಾಯ ಮಾಡಿದ್ದಾರೆ ಎನ್ನುವುದು ಬಯಲಾಗಲಿದೆ ಎಂದು ಕ್ಯಾ.ಚೌಟ ಹೇಳಿದ್ದಾರೆ.

’ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ನ್ನು ಎನ್‌ಐಎಗೆ ವಹಿಸುವಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತ್ತು. ಆದರೆ, ಕೇವಲ ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರವು ನಿಷೇಧಿತ ಪಿಎಫ್‌ಐ ಸಂಘಟನೆಯ ಮುಂದುವರಿದ ಭಾಗವಾಗಿರುವ ಎಸ್‌ಡಿಪಿಐ ಜತೆಗೇ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವಾಗ ಸುಹಾಸ್‌ ಶೆಟ್ಟಿ ಹತ್ಯೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸುಹಾಸ್‌ ಕುಟುಂಬಕ್ಕೆ ನ್ಯಾಯ ದೊರಕಿಸುತ್ತದೆ ಎನ್ನುವ ವಿಶ್ವಾಸ ಖಂಡಿತಾ ಇರಲಿಲ್ಲ. ಹೀಗಾಗಿಯೇ ನಮ್ಮ ಪಕ್ಷ ಕೂಡ ಈ ಪ್ರಕರಣವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸುವುದಕ್ಕೆ ಪಟ್ಟು ಹಿಡಿದಿತ್ತು. ಆದರೆ, ಇದೀಗ ಗೃಹ ಸಚಿವಾಲಯವೇ ಈ ಕೊಲೆಯ ಗಂಭೀರತೆಯನ್ನು ಮನಗಂಡು ಎನ್‌ಐಗೆ ಒಪ್ಪಿಸಿರುವ ಕಾರಣ ಖಂಡಿತವಾಗಿವೂ ಮತೀಯವಾದಿಗಳು ಹಾಗೂ ರಾಷ್ಟ್ರವಿರೋಧಿ ಶಕ್ತಿಗಳ ಪಿತೂರಿಗೆ ಬಲಿಯಾದ ಸುಹಾಸ್‌ ಶೆಟ್ಟಿ ಸಾವಿಗೆ ಹಾಗೂ ಮಗನನ್ನು ಕಳೆದುಕೊಂಡಿರುವ ನೊಂದ ಕುಟುಂಬಕ್ಕೆ ನ್ಯಾಯ ದೊರೆಯುವ ಪೂರ್ಣ ವಿಶ್ವಾಸವಿದೆ’ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678