canaratvnews

ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪಕಲಾ ಶಿಬಿರ ಸಮಾರೋಪ; ಸಾಂಪ್ರದಾಯಿಕ ಕಲೆಗಳ ರಕ್ಷಣೆಗೆ ವಿನ್ಸೆಂಟ್‌ ಕುಟಿನ್ಹಾ ಕರೆ

ಮಂಗಳೂರು: “ನೂರಾರು ವರ್ಷಗಳ ಹಿಂದೆ ನಿರ್ಮಿಸಲಾದ ಪ್ರಾಚೀನ ಶಿಲ್ಪಗಳು ಮತ್ತು ಗುಹಾಚಿತ್ರಗಳು ಇಂದಿಗೂ ಜನರೊಂದಿಗೆ ಸಂವಹನ ನಡೆಸುತ್ತಿವೆ. ಇದು ನಮ್ಮ ಕರಕುಶಲತೆಯ ಅಜರಾಮರ ಮೌಲ್ಯವನ್ನು ಸಾಬೀತುಪಡಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಕಲೆಯ ಸ್ವರೂಪ ಬದಲಾಗುತ್ತಿದ್ದರೂ, ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ರಕ್ಷಿಸುವ ತುರ್ತು ಅಗತ್ಯವಿದೆ” ಎಂದು ಪ್ರೊವಿಟ್‌ ಫುಡ್ಸ್‌ ಪ್ರೈ.ಲಿ. ಮಾಲಕ ಹಾಗೂ ಕಲಾಭಿಮಾನಿ ವಿನ್ಸೆಂಟ್ ಕುಟಿನ್ಹಾ ಕರೆ ನೀಡಿದರು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಜೂನ್ 12 ರಿಂದ 26 ರವರೆಗೆ ನಡೆದ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರದ ಸಮಾರೋಪ ಮತ್ತು ಶಿಲ್ಪಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಇದೇ ವೇಳೆ ಅವರು ರಿಬ್ಬನ್‌ ಕತ್ತರಿಸುವ ಮೂಲಕ ನೂತನ ಶಿಲ್ಪಗಳನ್ನು ಲೋಕಾರ್ಪಣೆಗೊಳಿಸಿದರು.

ಕಲಾಂಗಣಕ್ಕೆ ಮೆರುಗು ನೀಡಿದ ಭವ್ಯ ಶಿಲ್ಪಗಳು: 15 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ನುರಿತ ಕಲಾವಿದರು ತಮ್ಮ ಕೈಚಳಕದ ಮೂಲಕ ಅದ್ಭುತ ಕಲಾಕೃತಿಗಳನ್ನು ಸೃಷ್ಟಿಸಿದ್ದಾರೆ. ಕಲಾಂಗಣದಲ್ಲಿ ಅನಾವರಣಗೊಂಡ ಪ್ರಮುಖ ಶಿಲ್ಪಗಳು ಇಲ್ಲಿವೆ:

ಬೃಹತ್ ಶಿಲ್ಪಗಳು: 15 ಅಡಿ ಎತ್ತರದ ಕೈಯಲ್ಲಿ ಎತ್ತಿ ಹಿಡಿದ ಗುಮಟೆ, ಹಾಡುತ್ತಿರುವ ಎರಿಕ್‌ ಒಝೇರಿಯೊ, ಓರ್ವ ಕವಿ, ಮೀನು ಹಿಡಿಯುವ ಖಾರ್ವಿ ಮತ್ತು ಅಂಬಿಗನ ಶಿಲ್ಪಗಳು.

ಸಂಗೀತ ಮತ್ತು ನೃತ್ಯ ಕೃತಿಗಳು: ದಫ್‌ ನುಡಿಸುವ ದಾಲ್ದಿ, ವಯೊಲಿನ್‌, ವೀಣೆ, ಟ್ರಂಪೆಟ್‌, ಮಾಂಡೊ ಮತ್ತು ಬಾಯ್ಲಾ ನೃತ್ಯಗಾರರು ಹಾಗೂ ನಾಟಕಕಾರರ ಸಿಮೆಂಟ್ ಶಿಲ್ಪಗಳು.

6 ಉಬ್ಬು ಶಿಲ್ಪಗಳು: ಗೋಡೆಯ ಮೇಲೆ ಮೂಡಿಬಂದಿರುವ ಈ ಶಿಲ್ಪಗಳು ಕರಾವಳಿಯ ಇತಿಹಾಸವನ್ನು ಸಾರುತ್ತವೆ. ಗೋವಾದಿಂದ ಮಂಗಳೂರಿಗೆ ವಲಸೆ ಬಂದ ಇತಿಹಾಸ, ಕುಡುಮಿಗಳ ಹಗ್ಗದಾಟ, ಮೊಂತಿ ಹಬ್ಬ, ನವಾಯತಿ ಮುಸ್ಲಿಮರ ಸಂಸ್ಕೃತಿ, ರಥ ಬೀದಿಯ ತೇರು ಮತ್ತು ಗೋವಾದ ಕಾರ್ನಿವಲ್‌ ಸಂಭ್ರಮದ ದೃಶ್ಯಗಳು ಇಲ್ಲಿ ಅತ್ಯಂತ ಆಕರ್ಷಕವಾಗಿ ಮೂಡಿಬಂದಿವೆ.

ಶಿಬಿರದ ನಿರ್ದೇಶಕ ಶಿವಮೊಗ್ಗ ಜಿಲ್ಲೆಯ ಕೆ. ನಾರಾಯಣ ರಾವ್, ಹಿರಿಯ ಶಿಲ್ಪಿಗಳು ಹಾಗೂ ಸಹಾಯಕ ಶಿಲ್ಪಿಗಳನ್ನು ಆಯೋಜಕರು ಸನ್ಮಾನಿಸಿದರು.


ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಎಂ. ಸಿ. ರಮೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಆಲ್ವಾರಿಸ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿಬಿರದ ಸಂಚಾಲಕ ಕುಮಾರ್ ವೈ. ಅವರು ವಂದನಾರ್ಪಣೆ ಮಾಡಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

Share News
Exit mobile version