ಮಂಗಳೂರು, ಮೇ 27 : ಕರಾವಳಿ ಮೂಲದ ಯುವತಿ ನಿಶೆಲ್ ಫ್ಲೋರಾ ಅಲ್ಮೆಡಾ ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಳ್ಳುವ ಮೂಲಕ ದೇಶ ಸೇವೆಗೆ ಮುಂದಾಗಿದ್ದಾರೆ.

ಮಂಗಳೂರಿನ ಕುಲಶೇಖರದ ಕೊಂಗೂರು ನಿವಾಸಿ ನವೀನ್ ಅಲ್ಮೆಡಾ ಹಾಗೂ ಕ್ರಿಸ್ ಎವರ್ಟ್ ಡಿಸೋಜಾ ಅವರು, ಪ್ರತಿಷ್ಠಿತ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇನಾ ತರಬೇತಿ ಪೂರ್ಣಗೊಳಿಸಿ ಈ ಸಾಧನೆ ಮಾಡಿದ್ದಾರೆ.
ಸಂತ ಅಲೋಶಿಯಸ್ ನಲ್ಲಿ ಪಿಯುಸಿ ವರೆಗಿನ ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಅವರು ಎರಡನೇ ರ್ಯಾಂಕ್ ಪಡೆದಿದ್ದರು. ಬಳಿಕ ಭಾರತೀಯ ಸಶಸ್ತ್ರ ಪಡೆಗಳಿಗೆ ಪ್ರವೇಶ ನೀಡುವ ಆಯ್ಕೆ ಪ್ರಕ್ರಿಯೆಗಳಲ್ಲಿ ಒಂದಾದ ಎಸ್ ಎಸ್ ಬಿ ಯ ವಿವಿಧ ಹಂತಗಳನ್ನು ಪೂರ್ಣಗೊಳಿಸಿ ತರಬೇತಿಗೆ ಆಯ್ಕೆಗೊಂಡರು. ೨೦೨೫ರ ಜೂನ್ ನಿಂದ ಕೇರಳದ ಪಯ್ಯನ್ನೂರಿನಲ್ಲಿ ಒಂದು ವರ್ಷಗಳಕಾಲ ನಡೆದ ತರಬೇತಿಗೆ ಹಾಜರಾಗಿ ಹಲವು ಕಠಿಣ ಸನ್ನಿವೇಶಗಳನ್ನು ನಿಭಾಯಿಸಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ್ದಾರೆ. ಮೇ ೨೮ ಕ್ಕೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಳ್ಳಲಿದ್ದಾರೆ.
ಹೈಸ್ಕೂಲ್ ನಲ್ಲಿರುವಾಗಲೇ ಎನ್ ಸಿಸಿಯಲ್ಲಿ ಸಕ್ರೀಯವಾಗಿದ್ದ ನಿಶೆಲ್ ಅವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ಗೆ 2017ರಲ್ಲಿ 9ನೇ ತರಗತಿಯಲ್ಲಿದ್ದಾಗ ಆಯ್ಕೆಯಾಗಿ ಪೆರೇಡ್ ನಲ್ಲಿ ಭಾಗವಹಿಸಿದ್ದರು.
ಕುಲಶೇಖರದ ಕೊಂಗೂರು ನಿವಾಸಿ ನವೀನ್ ಅಲ್ಮೆಡಾ ಹಾಗೂ ಕ್ರಿಸ್ ಎವರ್ಟ್ ಡಿಸೋಜಾ ಅವರ ಪುತ್ರಿ. ಕ್ರಿಶಲ್ ಲರಾ ಅವರ ಸಹೋದರಿ. ಮಂಗಳೂರಿನ ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿನಿ.
ನಿಶೆಲ್ ಫ್ಲೋರಾ ಅಲ್ಮೆಡಾ ಅವರು ಮಾಧ್ಯಮ ಜತೆ ಮಾತನಾಡಿ, ಈ ದಿನಕ್ಕಾಗಿ ಬಾಲ್ಯದಿಂದಲೇ ಕನಸು ಕಟ್ಟಿದ್ದೆ. ಬಾಲ್ಯದಲ್ಲಿ ಸೇನಾ ಅಧಿಕಾರಿಗಳನ್ನು ಕಂಡು ನೌಕಾಪಡೆ ಸೇರಬೇಕೆಂಬ ಆಸೆ ಮೂಡಿತ್ತು. ಅದಕ್ಕೆ ಪೂರಕ ತಯಾರಿ ಹಾಗೂ ಪ್ರಯತ್ನಗಳನ್ನು ಮುಂದುವರೆಸಿದ್ದೆ. ಪೋಷಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ತರಬೇತಿಯ ಸಮಯ ತುಂಬಾ ಕಠಿಣವಾಗಿತ್ತು. ಮನೆಯವರೊಂದಿಗೆ ಮಾತನಾಡಲು ಅವಕಾಶ ಇರುತ್ತಿರಲಿಲ್ಲ. ವಾರದಲ್ಲಿ ಒಂದು ದಿನ ಮಾತ್ರವೇ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶವಿತ್ತು. ಸ್ಮಾರ್ಟ್ ಫೋನ್ ಬಳಕೆಗೆ ಅವಕಾಶ ಇಲ್ಲದ ಕಾರಣ ಅಪ್ಪ-ಅಮ್ಮನ ಮುಖನೋಡಲು ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಎಲ್ಲಾ ಪರಿಶ್ರಮ, ತ್ಯಾಗದ ಫಲವಾಗಿದೆ ಎಂದು ತಿಳಿಸಿದ್ದಾರೆ.
ಮಗಳ ಸಾಧನೆಯ ಬಗ್ಗೆ ಮಾತನಾಡಿದ ಅವರ ತಾಯಿ ಕ್ರಿಸ್ ಎವರ್ಟ್ ಡಿಸೋಜಾ ಅವರು, ಬಾಲ್ಯದಲ್ಲಿ ತನ್ನ ಗುರಿಯನ್ನು ಆಕೆ ನಿರ್ಧರಿದ್ದಳು. ಅದರಂತೆ ತಯಾರಿ ನಡೆಸಿದ ಅವಳು ಏರೋನಾಟಿಕ್ ಎಂಜಿನಿಯರಿಂಗನ್ನು ಬೆಂಗಳೂರಿನಲ್ಲಿ ಪಡೆದಿದ್ದಾಳೆ. ಅನೇಕ ಸಂದರ್ಭದಲ್ಲಿ ಬೇರೆ ಅವಕಾಶಗಳನ್ನು ನೋಡುವಂತೆ ನಾವು ತಿಳಿಸಿದರೂ ಅವಳು ತನ್ನ ಗುರಿಯಿಂದ ಕದಡಿಲ್ಲ. ತನ್ನ ಕನಸನ್ನು ಕಠಿಣ ಪರಿಶ್ರಮದಿಂದ ಈಡೇರಿಸಿದ್ದಾಳೆ. ಮಗಳ ಸಾಧನೆಯ ಬಗ್ಗೆ ಅಪಾರ ಅಭಿಮಾನವಿದೆ ಎನ್ನುತ್ತಾರೆ