ರೋಮ್: ‘ಜೀಸಸ್ ಶಾಂತಿಯ ಸಂಕೇತ. ಅವರು ಯಾವ ಯುದ್ಧವನ್ನೂ ಬೆಂಬಲಿಸುವುದಿಲ್ಲ. ಯೇಸು ಬೆಂಬಲದ ಹೆಸರಿನಲ್ಲಿ ಯಾರೂ ಯುದ್ಧವನ್ನು ಸಮರ್ಥಿಸಲಾಗದು’. “ಮಾನವೀಯತೆಯು ಇಂದು ಶಿಲುಬೆಗೇರಿಸಲ್ಪಟ್ಟಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮಾತುಕತೆಯ ಮೂಲಕ ಶಾಂತಿ ಕಂಡುಕೊಳ್ಳಿ” ಎಂದು ಪಶ್ಚಿಮ ಏಷ್ಯಾದ ದೇಶಗಳಿಗೆ ಪೋಪ್ 14ನೇ ಲಿಯೊ ಕರೆ ನೀಡಿದ್ದಾರೆ.

‘ಗರಿಗಳ ಭಾನುವಾರ’ ಆಚರಣೆಯ ಅಂಗವಾಗಿ ವ್ಯಾಟಿಕನ್ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರನ್ನು ಉದ್ದೇಶಿಸಿ ಸಂದೇಶ ನೀಡಿದ ಅವರು, ‘ದೇವರು ಹಿಂಸೆಯನ್ನು ಒಪ್ಪುವುದಿಲ್ಲ, ಯುದ್ಧ ಮಾಡುವರ ಪ್ರಾರ್ಥನೆಯನ್ನೂ ಅವರು ಆಲಿಸುವುದಿಲ್ಲ, ಜೀಸಸ್, ತುಳಿತಕ್ಕೊಳಗಾದವರನ್ನು ಸಾಂತ್ವನಗೊಳಿಸುವ ದೇವರು. ಯುದ್ಧವು ಮನುಕುಲದ ಘೋರ ದುರಂತ’ ಎಂದು ಹೇಳಿದರು.
ಕಳೆದ ಐದು ವಾರಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಗ್ಗೆ ಮಾತನಾಡಿದ ಅವರು, “ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಿ! ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬುದನ್ನು ನೆನಪಿಡಿ. ಯುದ್ಧದಿಂದ ಯಾರೂ ಗೆಲ್ಲಲು ಸಾಧ್ಯವಿಲ್ಲ, ಕೇವಲ ಮಾನವೀಯತೆ ಸೋಲುತ್ತದೆ” ಎಂದು ಮಾರ್ಮಿಕವಾಗಿ ಹೇಳಿದರು.

ಪಶ್ಚಿಮ ಏಷ್ಯಾ ಸಂಘರ್ಷವನ್ನು ಇಸ್ರೇಲ್, ಅಮೆರಿಕ, ಇರಾನ್‌ನ ಮುಖಂಡರು ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಂಡಿದ್ದಾರೆ. ‘ಮಿಲಿಟರಿ ಶಕ್ತಿಯಿಂದ ತನ್ನ ಶತ್ರುರಾಷ್ಟ್ರವನ್ನು ಮಣಿಸಲು ಪ್ರಯತ್ನಿಸುತ್ತಿರುವ ಕ್ರಿಶ್ಚಿಯನ್ ರಾಷ್ಟ್ರ ಅಮೆರಿಕ’ ಎಂದು ಅಲ್ಲಿನ ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ಹೇಳಿದ್ದಾರೆ. ರಷ್ಯಾದ ಆರ್ಥೊಡೆಕ್ಸ್ ಚರ್ಚ್ ಕೂಡ, ಉಕ್ರೇನ್ ವಿರುದ್ಧದ ಯುದ್ಧವನ್ನು ‘ಪವಿತ್ರ ಯುದ್ಧ’ ಎಂದು ಕರೆದಿದೆ.


ಪೋಪ್ ಲಿಯೊ ಅವರು, ಯುದ್ಧದಿಂದಾಗಿ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಂಕಷ್ಟ ಎದುರಿಸುತ್ತಿರುವ ಕ್ರೈಸ್ತರಿಗಾಗಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ‘ಯುದ್ಧದಿಂದಾಗಿ ಪ್ರಚಂದಾದ್ಯಂತ ಎಷ್ಟೊಂದು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಕ್ರೈಸ್ತರು ಮರೆಯಬಾರದು. ಯುದ್ಧ ಕೊನೆಗೊಳ್ಳಲು ದೇವರ ಬಳಿ ನಿಮ್ಮ ಪ್ರಾರ್ಥನೆ ಸಲ್ಲಿಸಿ’ ಎಂದು ಅವರು ಮನವಿ ಮಾಡಿದರು.


