ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವ್ಯವಸ್ಥೆಯ ಸೊಬಗಿಗೆ ಇಂದು ಮತ್ತೊಂದು ಆಕರ್ಷಣೀಯ ಆಧುನಿಕ ಸೌಲಭ್ಯದ ಸೇರ್ಪಡೆ.ಈಗಾಗಲೇ ಲಯನ್ಸ್ ಕ್ಲಬ್ ಇಂಟರ್ನೇಶನಲ್ ಸಂಸ್ಥೆಯ ವತಿಯಿಂದ ಅಂದಿನ ಲಯನ್ಸ್ ಗವರ್ನರ್ ಆಗಿದ್ದ ಲಯನ್ ವಸಂತ್ ಶೆಟ್ಟಿಯವರಿಂದ ಅನುದಾನಿತಗೊಳಿಸಲ್ಪಟ್ಟು ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಕೊಡುಗೆಯಾಗಿ ಬಂದಂತಹ ವಿಡಿಯೋ ಕಾನ್ಫರೆನ್ಸ್ ಹಾಲ್ ಮತ್ತೊಂದಿಷ್ಟು ಬೆಳವಣಿಗೆಯೊಂದಿಗೆ ಅಂದದ ಸ್ವರೂಪವನ್ನು ಪಡೆದುಕೊಂಡ ರಮಣೀಯ ದೃಶ್ಯ.


ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಮಾರು ಹದಿಮೂರು ಮೈಕ್ರೋಫೋನ್ ಗಳ ಅಳವಡಿಕೆ,ಹೈ ಸ್ಟ್ಯಾಂಡರ್ಡ್ amplifier ಹಾಗೂ ಪೂರಕ ವ್ಯವಸ್ಥೆಗಳನ್ನು ಪಡೆದುಕೊಂಡು ಎಲ್ಲರ ಮನಮೆಚ್ಚಿಸಿದಂತಹ ವಾತಾವರಣ ನಿರ್ಮಾಣವಾಗಿದೆ.ಸುಮಾರು 2.5 ಲಕ್ಷ ರೂಪಾಯಿ ವೆಚ್ಚದ ಈ ಉಪಕರಣಗಳು ನಿಸ್ವಾರ್ಥ ಮನಸ್ಸಿನ ದಾನಿಗಳಿಂದ ಪಡೆದಿರುವಂತಹುದು ಎನ್ನುವುದು ಉಲ್ಲೇಖನೀಯ.ಐವತ್ತು ಜನರು ಏಕಕಾಲಕ್ಕೆ ಆಸೀನರಾಗಬಹುದಾದಂತಹ ಸುಖಾಸೀನ ವ್ಯವಸ್ಥೆ ಇದರ ಸುಂದರತೆಯ ಇನ್ನೊಂದು ಭಾಗ.

ಉನ್ನತ ಮಟ್ಟದ ಸಭೆಗಳ ಜೊತೆಯಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು,ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ, ಆರೋಗ್ಯ ತರಬೇತಿ ಕಾರ್ಯಕ್ರಮಗಳನ್ನು ಸುಲಲಿತವಾಗಿ ನೆರವೇರಿಸ ಬಹುದಾದ ನಿಟ್ಟಿನಲ್ಲಿ ಅಳವಡಿಸಲಾದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ವ್ಯವಸ್ಥೆ ಸರಕಾರಿ ಸ್ವಾಮ್ಯದ ಲೇಡಿಗೋಷನ್ ಆಸ್ಪತ್ರೆಗೆ ವಿಶೇಷ ಮೆರುಗನ್ನು ಕೊಟ್ಟಿರುವುದಂತೂ ಸತ್ಯ.

ಇಂಥಹ ಅತ್ಯಾಧುನಿಕ ಸಂವಹನ ವ್ಯವಸ್ಥೆಗಳು ಸರಕಾರೀ ವ್ಯವಸ್ಥೆಯನ್ನು ಸುಂದರೀಕರಣ ಗೊಳಿಸುವುದರ ಜೊತೆಯಲ್ಲಿ ಜನರಲ್ಲಿ ಸದಭಿಪ್ರಾಯವನ್ನು ಮೂಡಿಸುವುದರಲ್ಲಿ ಸಂದೇಹವಿಲ್ಲ ಎಂದು ಲೇಡಿಗೋಷನ್ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


