ಮಂಗಳೂರು: ದಲಿತೋದ್ದಾರಕ ಕುದ್ಮುಲ್ ರಂಗರಾಯರ ಜಯಂತಿಯನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲೇ ಆಚರಿಸುವ ಕುರಿತು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ದಲಿತ ಮುಖಂಡರು ಮತ್ತು ಪಾಲಿಕೆ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, “ಕಳೆದ ಬಾರಿ ಪಾಲಿಕೆ ವತಿಯಿಂದ ಕುದ್ಮುಲ್ ರಂಗರಾಯರ ಜಯಂತಿ ಆಚರಿಸದಿರುವುದು ಅತ್ಯಂತ ಬೇಸರದ ಸಂಗತಿ. ಈ ಬಗ್ಗೆ ದಲಿತ ಮುಖಂಡರು ಕುಂದುಕೊರತೆ ಸಭೆಯಲ್ಲೂ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ತಪ್ಪುಗಳು ಮುಂದೆ ಮರುಕಳಿಸಬಾರದು,” ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.
ಹಿಂದಿನ ವರ್ಷಗಳಲ್ಲಿ ನಮ್ಮ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಂಗರಾಯರ ಜನ್ಮದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತು. ಅದೇ ಮಾದರಿಯನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗಬೇಕು. ಜಯಂತಿ ಆಚರಣೆಗೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಪಾಲಿಕೆ ವತಿಯಿಂದಲೇ ಮೀಸಲಿಡಬೇಕು,” ಎಂದು ಶಾಸಕರ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಮಹತ್ವದ ಸಭೆಯಲ್ಲಿ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್, ಉಪ ಆಯುಕ್ತರಾದ ನರೇಶ್ ಶೆಣೈ, ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಅಡಿಗ, ಮಾಲಿನಿ, ನಿಕಟಪೂರ್ವ ಪಾಲಿಕೆ ಸದಸ್ಯ ಶೈಲೇಶ್ ಶೆಟ್ಟಿ, ಶಿವುಕುಮಾರ್, ದಲಿತ ಮುಖಂಡರಾದ ರಘುವೀರ್ ಬಾಬುಗುಡ್ಡೆ, ಶಿವಪ್ಪ ನಂತೂರು, ಹೃದಯನಾಥ್, ಸಂದೀಪ್ ಬೋಳೂರು, ಕಿರಣ್ ಕೊಡಿಯಾಲ್ ಬೈಲ್, ಪ್ರಕಾಶ್ ಕೋಡಿಕಲ್, ಉಮೇಶ್ ಕುಮಾರ್, ದೇವೇಂದ್ರ, ಪ್ರಭಾಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.