DAKSHINA KANNADALATEST NEWS

ಕುಡ್ಲದ ಪಿಲಿಪರ್ಬ-2026’: ‘ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್’ ತಂಡದ ಮುಡಿಗೇರಿದ ಕಿರೀಟ

ಮಂಗಳೂರು: ಮಾಜಿ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ‘ಕುಡ್ಲದ ಪಿಲಿಪರ್ಬ-2026’ ಸೀಸನ್-5 ರ ಜಿದ್ದಾಜಿದ್ದಿನ ಹುಲಿವೇಷ ಸ್ಪರ್ಧಾಕೂಟವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.ಒಟ್ಟು 11 ಖ್ಯಾತ ತಂಡಗಳ ನಡುವೆ ನಡೆದ ರೋಮಾಂಚನಕಾರಿ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ‘ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್’ ತಂಡವು ಪ್ರತಿಷ್ಠಿತ ಪಿಲಿಪರ್ಬ-2026 ರ ರಾಜಗಾಂಭೀರ್ಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.ಸ್ಪರ್ಧೆಯ ತೀವ್ರ ಪೈಪೋಟಿಯಲ್ಲಿ ‘ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ’ ತಂಡವು ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ‘ರಾಜ್ ಫ್ರೆಂಡ್ಸ್ ಪೊಳಲಿ ಪುರಲ್ದ ಅಪ್ಪೆನ ಮೋಕೆದ ಜೋಕುಲು’ ಮತ್ತು ‘ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ’ ಜಂಟಿಯಾಗಿ ತೃತೀಯ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರವಾದವು.ವಿಶೇಷ ಹಾಗೂ ವಿಭಾಗವಾರು ಪ್ರಶಸ್ತಿಗಳ ವಿವರ:
ಕರಾವಳಿಯ ಸಾಂಪ್ರದಾಯಿಕ ಕಲೆಗೆ ಗೌರವ ಸಲ್ಲಿಸುವ ಈ ಉತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ತಂಡಗಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು:• ಕಪ್ಪು ಪಿಲಿ ಪ್ರಶಸ್ತಿ: ಟ್ಯಾಲೆಂಟ್ ಟೈಗರ್ಸ್ MYB ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು ತಂಡ
• ಮರಿ ಹುಲಿ ಪ್ರಶಸ್ತಿ (ಜಂಟಿ): ರಾಜ್ ಫ್ರೆಂಡ್ಸ್ ಪೊಳಲಿ ಮತ್ತು ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ
• ಪರ್ಬದ ಪಿಲಿ ಪ್ರಶಸ್ತಿ: ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ ಪಡೆ
• ಶಿಸ್ತಿನ ತಂಡ: ಪಾಂಡೇಶ್ವರ ಶಾರದಾ ಹುಲಿ
• ತಾಸೆ ಹಿಮ್ಮೇಳ ವಿಭಾಗ: ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್
• ಬಣ್ಣಗಾರಿಕೆ ಹಾಗೂ ಮುಡಿ ವಿಭಾಗ: ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ
• ಮೆರವಣಿಗೆ ಹಾಗೂ ಧರಣಿ ಮಂಡಲ ಪ್ರಶಸ್ತಿ: ಹನುಮಾನ್ ಟೈಗರ್ಸ್ ಉಪ್ಪಳ
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ 11 ತಂಡಗಳಿಗೂ ಪ್ರೋತ್ಸಾಹ ಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸುವ ಮೂಲಕ ಐದನೇ ಆವೃತ್ತಿಯ ಸಾಂಸ್ಕೃತಿಕ ಹಬ್ಬಕ್ಕೆ ತೆರೆ ಎಳೆಯಲಾಯಿತು.ಈ ಸಾಂಸ್ಕೃತಿಕ ಮಹೋತ್ಸವದಲ್ಲಿ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪಾಲಿಕೆ ಆಯುಕ್ತ ರಾಹೂಲ್ ರತ್ನಂ ಪಾಂಡೆ, ಶಾಸಕರುಗಳಾದ ಡಾ. ಭರತ್ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು ಉಪಸ್ಥಿತರಿದ್ದರು. ಅಲ್ಲದೆ ಚಲನಚಿತ್ರ ತಾರೆಗಳಾದ ಶೈನ್ ಶೆಟ್ಟಿ, ಅರ್ಜುನ್ ದೇವ್, ತನ್ವಿ ರಾಮ್, ರೂಪಶ್ರೀ ವರ್ಕಾಡಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share News