ಮಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ್ದನ್ನೇ ‘ಹಿಂದೂ ವಿರೋಧಿ ನೀತಿ’ ಎಂದು ಬಿಂಬಿಸಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಮುಂದೆ ಎಬಿವಿಪಿ (ABVP) ನಡೆಸಿದ ಪ್ರತಿಭಟನೆಯು ತೀವ್ರ ಖಂಡನೀಯವಾಗಿದ್ದು, ಇದು ಸ್ಥಳೀಯ ಶಾಸಕರು ನಡೆಸುತ್ತಿರುವ ಕೋಮು ರಾಜಕಾರಣದ ಷಡ್ಯಂತ್ರ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಅರಾಜಕತೆ ಸೃಷ್ಟಿಸಿ, ಧರ್ಮಗಳ ನಡುವೆ ಕಂದಕ ಮೂಡಿಸಲು ಶಾಸಕರು ಯತ್ನಿಸುತ್ತಿದ್ದಾರೆ ಎಂದು ದೂರಿದರು.

‘ನಗರದ ಶಾಂತಿ ಕೆಡಿಸಲು ಪೂರ್ವಯೋಜಿತ ಸಂಚು’
ಪ್ರಸ್ತುತ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಕಾನೂನು ಕ್ರಮದಿಂದಾಗಿ ಮಂಗಳೂರು ನಗರ ಶಾಂತವಾಗಿದೆ. ಆದರೆ, ಸಮಾಜದಲ್ಲಿ ಧರ್ಮದ ಆಧಾರದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಅವರು ಎಬಿವಿಪಿ ಕಾರ್ಯಕರ್ತರನ್ನು ಕಳುಹಿಸಿ ನಗರದ ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇದು ಸಂಪೂರ್ಣ ಪೂರ್ವಯೋಜಿತ ದಾಳಿಯಾಗಿದೆ” ಎಂದು ವಿನಯರಾಜ್ ಗಂಭೀರವಾಗಿ ಆರೋಪಿಸಿದರು. ಸೈಂಟ್ ಆಗ್ನೆಸ್ ಕಾಲೇಜನ್ನು ಅಲ್ಪಸಂಖ್ಯಾತ ಕ್ರೈಸ್ತ ಧರ್ಮ ಭಗಿನಿಯರು ನಡೆಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಈ ಸಂಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆಸುವುದು ಅಕ್ಷಮ್ಯ ಅಪರಾಧ ಎಂದರು.

104 ವರ್ಷಗಳ ಇತಿಹಾಸವಿರುವ ಸಂಸ್ಥೆಗೆ ‘ಹಿಂದೂ ವಿರೋಧಿ’ ಪಟ್ಟ ಏಕೆ?
ಕಾಲೇಜಿನ ಧಾರ್ಮಿಕ ತಾರತಮ್ಯದ ಆರೋಪಗಳನ್ನು ತಳ್ಳಿಹಾಕಿದ ಅವರು, “ಕಳೆದ 104 ವರ್ಷಗಳಿಂದ ಯಾವುದೇ ಭೇದಭಾವವಿಲ್ಲದೆ ವಿದ್ಯಾದಾನ ಮಾಡುತ್ತಿರುವ ಹೆಮ್ಮೆಯ ಸಂಸ್ಥೆಯಿದು. ಸರಕಾರ ಘೋಷಿಸಿದ ಎಲ್ಲಾ ಧರ್ಮಗಳ ಹಬ್ಬಗಳಿಗೆ ಮಾತ್ರವಲ್ಲದೆ, ಸರಕಾರದ ಅಧಿಕೃತ ರಜೆ ಇರದ ಕೃಷ್ಣ ಜನ್ಮಾಷ್ಟಮಿ ಹಾಗೂ ನಾಗರ ಪಂಚಮಿ ಹಬ್ಬಗಳಿಗೂ ಈ ಕಾಲೇಜು ರಜೆ ನೀಡುತ್ತದೆ. ಹೀಗಿರುವಾಗ ಇದನ್ನು ಹಿಂದೂ ವಿರೋಧಿ ಎಂದು ಬಿಂಬಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.
ನಿಯಮದಂತೆಯೇ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿತ್ತು
ಸ್ವಾಯತ್ತ ಕಾಲೇಜುಗಳು ನಿಯಮದ ಪ್ರಕಾರವೇ ಪರೀಕ್ಷೆ ನಡೆಸಬೇಕು. 90 ದಿನಗಳ ತರಗತಿ ಮುಗಿದ ಬಳಿಕ ಒಂದು ವಾರ ರಿವಿಜನ್ ರಜೆ ನೀಡಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗೆ ಸಂಬಂಧಿಸಿದ ಡ್ರಾಫ್ಟ್ ಟೈಮ್ ಟೇಬಲ್ ಅನ್ನು ಒಂದು ತಿಂಗಳ ಮೊದಲೇ ನೋಟೀಸ್ ಬೋರ್ಡ್ನಲ್ಲಿ ಹಾಕಲಾಗಿತ್ತು. ಯಾವುದೇ ಬದಲಾವಣೆ ಇದ್ದಲ್ಲಿ 15 ದಿನದೊಳಗೆ ರಿಜಿಸ್ಟ್ರಾರ್ ಅವರಿಗೆ ಲಿಖಿತ ಮನವಿ ಕೊಡಲು ಅವಕಾಶವಿತ್ತು. ಆದರೆ, ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆ ಮುಂದೂಡುವಂತೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿರಲಿಲ್ಲ ಎಂದು ಕಾಲೇಜು ಸ್ಪಷ್ಟಪಡಿಸಿದೆ.

ಯುವ ಮನಸ್ಸುಗಳಲ್ಲಿ ದ್ವೇಷ ಬಿತ್ತುವ ಯತ್ನ: ತನಿಖೆಗೆ ಆಗ್ರಹ
ಇದೇ ದಸರಾ ಅವಧಿಯಲ್ಲಿ ಜಿಲ್ಲೆಯ ಇತರ ಕಾಲೇಜುಗಳಲ್ಲೂ ಪರೀಕ್ಷೆಗಳು ನಡೆಯುತ್ತಿದ್ದವು. ಅಲ್ಲಿಗೆ ಹೋಗದ ಎಬಿವಿಪಿ ಇಲ್ಲಿ ಮಾತ್ರ ಏಕೆ ಪ್ರತಿಭಟನೆ ನಡೆಸಿತು? ಇದು ಬಿಜೆಪಿ ಮತ್ತು ಸಂಘ ಪರಿವಾರದ ಧರ್ಮಾಧಾರಿತ ರಾಜಕಾರಣಕ್ಕೆ ಸ್ಪಷ್ಟ ಸಾಕ್ಷಿ” ಎಂದ ವಿನಯರಾಜ್, ವಿದ್ಯಾರ್ಥಿಗಳಿಂದ ಧರ್ಮದ ಆಧಾರದ ಮೇಲೆ ಅವಮಾನಕಾರಿ ಮತ್ತು ನಿಂದನಾತ್ಮಕ ಮಾತುಗಳನ್ನು ಆಡಿಸಿರುವುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿ ಸಂಘಟನೆಯ ಹೆಸರಿನಲ್ಲಿ ಅಪ್ರಾಪ್ತ ಹಾಗೂ ಯುವ ಮನಸ್ಸುಗಳಲ್ಲಿ ದ್ವೇಷ ಬಿತ್ತಿ ಅವರನ್ನು ರಾಜಕೀಯ ದಾಳವಾಗಿ ಬಳಸುವುದು ಸಮಾಜ ವಿರೋಧಿ ನಡೆಯಾಗಿದೆ ಎಂದರು.
ಶೈಕ್ಷಣಿಕ ವಿಷಯಗಳನ್ನು ರಾಜಕೀಯಗೊಳಿಸುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದ್ದು, ಇಂತಹ ಸಮಸ್ಯೆಗಳನ್ನು ಪ್ರತಿಭಟನೆಯ ಬದಲಾಗಿ ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು. ಈ ಘಟನೆಗಾಗಿ ಶಾಸಕರು ಸಾರ್ವಜನಿಕರ ಹಾಗೂ ಕಾಲೇಜಿನ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ಕಾಂಗ್ರೆಸ್ ಮುಖಂಡರಾದ ಅನಿಲ್ ಕುಮಾರ್, ಪ್ರಕಾಶ್ ಸಾಲ್ಯಾನ್, ನೀರಜ್ ಪಾಲ್ ಹಾಗೂ ಹೊನ್ನಯ್ಯ ಉದಯ್ ಆಚಾರ್ ಉಪಸ್ಥಿತರಿದ್ದರು.
