LATEST NEWS

ಸಚಿವ ಪ್ರಿಯಾಂಕ್ ಖರ್ಗೆ ಕೂಡಲೇ ಬಹಿರಂಗ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟ:ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು: ರಾಜ್ಯ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಲೋಪದೋಷಗಳು ಹಾಗೂ ಅಕ್ರಮಗಳ ಕುರಿತು ನ್ಯಾಯ ಕೇಳುತ್ತಿರುವ ನಿರುದ್ಯೋಗಿ ಯುವಜನತೆಯನ್ನು ಅಪಹಾಸ್ಯ ಮಾಡಿ, “ಅಭ್ಯರ್ಥಿಗಳು ಮೊದಲು 25 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಲಿ, ಅವರ ಮೇಲೆ ಲಾಠಿಚಾರ್ಜ್ ಮಾಡಿಸಿ ಆಮೇಲೆ ನಾನು ರಾಜೀನಾಮೆ ಕೊಡುತ್ತೇನೆ” ಎಂದು ಹೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಅಧಿಕಾರದ ಮದ ಹಾಗೂ ಅಹಂಕಾರದ ಪರಮಾವಧಿಯಾಗಿದೆ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಖಂಡಿಸಿದ್ದಾರೆ.


ಇದು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರವೋ?:
“ವರ್ಷಗಟ್ಟಲೆ ಹಗಲಿರುಳು ಕಷ್ಟಪಟ್ಟು ಓದಿ, ಪೊಲೀಸ್ ನೇಮಕಾತಿ ಪರೀಕ್ಷೆ ಬರೆದು ನ್ಯಾಯಕ್ಕಾಗಿ ಕಾಯುತ್ತಿರುವ ನಾಡಿನ ಬಡ ಹಾಗೂ ಮಧ್ಯಮ ವರ್ಗದ ಉದ್ಯೋಗಾಕಾಂಕ್ಷಿಗಳ ಬೆವರಿನ ಕಷ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆಟದ ವಸ್ತುವಾಗಿದೆಯೇ? ‘ಯುವಕರು 25 ದಿನ ಉಪವಾಸ ಬಿದ್ದು ಸಾಯಲಿ, ಅವರ ಮೇಲೆ ಲಾಠಿ ಬೀಸುತ್ತೇವೆ’ ಎಂದು ಹೇಳಲು ಇದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ಕಾಂಗ್ರೆಸ್‌ನ ಸರ್ವಾಧಿಕಾರಿ ಆಡಳಿತವೋ? ಅಧಿಕಾರದ ಗದ್ದುಗೆಯಲ್ಲಿರುವ ಸಚಿವರೊಬ್ಬರ ಬಾಯಿಯಲ್ಲಿ ಇಂತಹ ಕ್ರೂರ ಹಾಗೂ ಜನವಿರೋಧಿ ಮಾತುಗಳು ಬಂದಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು” ಎಂದು ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ‘ನೀಟ್’ ನೆಪ:
“ರಾಜ್ಯ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಆಡಳಿತಾತ್ಮಕ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಲೋಪದೋಷಗಳನ್ನು ಸರಿಪಡಿಸುವ ಯೋಗ್ಯತೆ ಇಲ್ಲದ ಪ್ರಿಯಾಂಕ್ ಖರ್ಗೆ ಅವರು, ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಕೇಂದ್ರದ ‘ನೀಟ್’ ಪರೀಕ್ಷೆಯ ನೆಪ ಹೇಳಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಯುವಜನತೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ, ಅಧಿಕಾರಕ್ಕೆ ಬಂದ ತಕ್ಷಣ ಯುವಕರ ಮೇಲೆ ಲಾಠಿಚಾರ್ಜ್ ಮಾಡಿಸುವ ಮತ್ತು ಅವರನ್ನು ಉಪವಾಸ ಕೆಡವುವ ದುರ್ಬುದ್ಧಿ ಬಂದಿರುವುದು ಅವರ ನೈಜ ಮುಖವಾಡವನ್ನು ಕಳಚಿಹಾಕಿದೆ” ಎಂದು ಕಿಶೋರ್ ಕುಮಾರ್ ಪುತ್ತೂರು ಕಿಡಿಕಾರಿದ್ದಾರೆ.

ಕೂಡಲೇ ಬಹಿರಂಗ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟ:
“ರಾಜ್ಯದ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಹೀಯಾಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಹಂಕಾರದ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದು, ನಾಡಿನ ಯುವಜನತೆಯ ಬಹಿರಂಗ ಕ್ಷಮೆಯಾಚಿಸಬೇಕು. ನೇಮಕಾತಿ ಪರೀಕ್ಷೆಯ ಲೋಪಗಳನ್ನು ಸರಿಪಡಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದೇ ಹೋದಲ್ಲಿ, ರಾಜ್ಯದ ಯುವಜನತೆಯೇ ಬೀದಿಗಿಳಿದು ಕಾಂಗ್ರೆಸ್ ಸರ್ಕಾರದ ಅಹಂಕಾರದ ಕೋಟೆಯನ್ನು ಉಡೀಸ್ ಮಾಡಲಿದ್ದಾರೆ. ಅಭ್ಯರ್ಥಿಗಳ ನ್ಯಾಯಯುತ ಬೇಡಿಕೆಗಳ ಪರವಾಗಿ ಭಾರತೀಯ ಜನತಾ ಪಾರ್ಟಿ ಹಾಗೂ ನಾನು ಸದಾ ಮುಂಚೂಣಿಯಲ್ಲಿ ನಿಂತು ಹೋರಾಡಲಿದ್ದೇವೆ” ಎಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Share News