ಮಂಗಳೂರು : ಕಿಂಗ್ಸ್ ಚೆಸ್ ಅಕಾಡೆಮಿ ವತಿಯಿಂದ ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ 13ನೇ ಕೆಸಿಎ ಟ್ರೋಫಿ ಆಲ್ ಇಂಡಿಯಾ ಮುಕ್ತ ಫಿಡೆ ರೇಟಿಂಗ್ ಚೆಸ್ ಟೂರ್ನಿ ನಡೆಯಿತು.
ಟೂರ್ನಿಗೆ ಚಾಲನೆ ನೀಡಿದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ನಿರ್ದೇಶಕ ,ವಕೀಲ ರಾಘವೇಂದ್ರ ರಾವ್ ಮಾತನಾಡಿ ” ಚೆಸ್ ಬೌದ್ಧಿಕ ಶಕ್ತಿಯ ಆಟವಾಗಿದ್ದು ಆಳವಾದ ಯೋಚನೆ ಮತ್ತು ತಂತ್ರಗಾರಿಕೆಯಿಂದ ಗೆಲುವು ಸಾಧಿಸಲಾಗುತ್ತದೆ. ಮಕ್ಕಳಲ್ಲಿ ಏಕಾಗ್ರತೆ, ಸಂಯಮ ಮತ್ತು ಜ್ಞಾನಶಕ್ತಿ ಬೆಳೆಸಲು ಚೆಸ್ ಆಟ ಅತ್ಯಂತ ಸಹಕಾರಿಯಾಗಿದೆ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ ಅಮೀನ್ ಕೋಡಿಕಲ್ ಮಾತನಾಡಿ ” ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಕ್ರೀಡೆಯಲ್ಲಿ ಬಾಲ್ಯದಲ್ಲೇ ಮಕ್ಕಳು ತೊಡಗಿಸಿಕೊಳ್ಳಲು ಹೆತ್ತವರು ಪ್ರೋತ್ಸಾಹ ನೀಡಬೇಕು’ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು. ಕಿಂಗ್ಸ್ ಚೆಸ್ ಅಕಾಡೆಮಿಯ ತರಬೇತುದಾರ ಪ್ರವೀಣ್ ಕಾಮತ್, ಟೂರ್ನಿಯ ಸಂಘಟಕರಾದ ವಿಜಯರಾಜ್ ಪೈ, ಅನೂಪ್ ಕಾಮತ್, ಶರತ್ ಕುಮಾರ್, ವಿನಯ್ ಕಾಮತ್ ಉಪಸ್ಥಿತರಿದ್ದರು. ಚೆಸ್ ತರಬೇತುದಾರ ಬಾಬು ಪೂಜಾರಿ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.
250 ಫಿಡೆ ರೇಟೆಡ್ ಆಟಗಾರರು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 565 ಆಟಗಾರರು ಟೂರ್ನಿಯ ವಿವಿಧ ವಯೋಮಾನ ವಿಭಾಗ ಹಾಗೂ ಮುಕ್ತ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
