ಮಂಗಳೂರು: ದೇಶದ ಜನರ ವಿಶ್ವಾಸಗಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ತೀವ್ರ ಹತಾಶೆ ಗೊಂಡಿದ್ದಾರೆ. ಅವರ ಈ ಹತಾಶೆಯ ಭಾವನೆ ಅವರು ಬಳಸುವ ಭಾಷೆಯಲ್ಲೇ ಅರಿವಾಗುತ್ತಿದ್ದು, ಮಲ್ಲಿಕಾರ್ಜುನ ಖರ್ಗೆಯವರು ಬಳಸಿರುವ ಭಾಷೆ ಅವರ ವ್ಯಕ್ತಿತ್ವವನ್ನೇ ತೋರಿಸುತ್ತಿದೆಯೇ ಹೊರತು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಘನತೆಗೆ ಕಿಂಚಿತ್ತೂ ಧಕ್ಕೆ ತರುವುದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ಮೋದಿ ವಿರುದ್ಧ ಲಘು ಪದಬಳಕೆ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
• ತಾಳ್ಮೆ ಕಳೆದುಕೊಂಡ ಖರ್ಗೆ: ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರು ಭಾಷಣವೊಂದರ ಮಧ್ಯೆ ತಾಳ್ಮೆ ಕಳೆದುಕೊಂಡು ವಿನಾಕಾರಣ ಮಾನ್ಯ ಪ್ರಧಾನಿಗಳ ತಂದೆಯವರನ್ನು ನಿಂದಿಸಿರುವುದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲದ ವ್ಯವಹಾರವಾಗಿದೆ.
• ಹಿರಿತನಕ್ಕೆ ಶೋಭಿಸದ ನಡವಳಿಕೆ: ರಾಜಕೀಯ ವಾಗಿ ಸುಧೀರ್ಘ ಅನುಭವ ಹೊಂದಿರುವ ಖರ್ಗೆಯವರಂತಹ ಹಿರಿಯ ನಾಯಕರು ತಮ್ಮ ಜವಾಬ್ದಾರಿಯನ್ನು ಅರಿತು ಮಾತಾಡಬೇಕು. ಇಂತಹ ಕ್ಷುಲ್ಲಕ ಹೇಳಿಕೆಗಳ ಮೂಲಕ ಸಾರ್ವಜನಿಕವಾಗಿ ತಮ್ಮ ಘನತೆಯನ್ನು ತಾವೇ ಕುಗ್ಗಿಸಿಕೊಂಡು ಸಣ್ಣವರಾಗಬಾರದು.
• ಪ್ರಧಾನಿಗೆ ಜನರ ಶ್ರೀರಕ್ಷೆ: ದೇಶಕ್ಕಾಗಿ ಮತ್ತು ದೇಶದ ಜನತೆಗಾಗಿ ಹಗಲಿರುಳು ಕರ್ತವ್ಯದಲ್ಲಿ ನಿರತರಾಗಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಕೋಟ್ಯಂತರ ಜನರ ಪ್ರೀತಿ ಹಾಗೂ ವಿಶ್ವಾಸವೇ ದೊಡ್ಡ ಶ್ರೀರಕ್ಷೆಯಾಗಿದೆ.
• ಜನರೇ ಪಾಠ ಕಲಿಸಲಿದ್ದಾರೆ: ಪ್ರಧಾನಿ ಅವರ ಶ್ರೀರಕ್ಷೆಯ ಮುಂದೆ ಕಾಂಗ್ರೆಸ್ಸಿನವರ ಇಂತಹ ಬಾಯಿ ಚಪಲದ, ಕ್ಷುಲ್ಲಕ ಹೇಳಿಕೆಗಳು ಲೆಕ್ಕಕ್ಕಿಲ್ಲ ಎಂಬುದನ್ನು ದೇಶದ ಜನರೇ ಚುನಾವಣೆಯಿಂದ ಚುನಾವಣೆಗೆ ಪದೇಪದೇ ಸೂಕ್ತ ಉತ್ತರ ನೀಡುವ ಮೂಲಕ ಸಾಬೀತುಪಡಿಸುತ್ತಿದ್ದಾರೆ.
“ರಾಜಕೀಯ ಟೀಕೆಗಳು ಸೌಜನ್ಯದ ವ್ಯಾಪ್ತಿಯಲ್ಲಿ ಇರಬೇಕೇ ಹೊರತು ಕುಟುಂಬದವರನ್ನು ಎಳೆದು ತರುವುದು ಹಿರಿಯ ರಾಜಕಾರಣಿಗೆ ಒಪ್ಪುವಂಥದ್ದಲ್ಲ” ಎಂದು ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
