canaratvnews

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆ: ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ಯುವರಾಜ್‌ಗೆ ಚಿನ್ನ ಹಾಗೂ ಬೆಳ್ಳಿ ಪದಕಗಳ ಗರಿ

ಬೆಂಗಳೂರು, ಜೂನ್ 09: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಜೂನ್ 5ರಂದು ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ 9ನೇ ತರಗತಿ ‘ಬಿ’ ವಿಭಾಗದ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಈ ಪ್ರತಿಭಾವಂತ ವಿದ್ಯಾರ್ಥಿ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಉದ್ದ ಜಿಗಿತ ಸ್ಪರ್ಧೆಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಕಠಿಣ ಸ್ಪರ್ಧೆಯಲ್ಲಿ ಎರಡು ಪ್ರಮುಖ ಪದಕಗಳನ್ನು ಗೆಲ್ಲುವ ಮೂಲಕ ಯುವರಾಜ್ ಅವರು ತಮ್ಮ ಶಾಲೆಗೆ ದೊಡ್ಡ ಕೀರ್ತಿ ತಂದಿದ್ದಾರೆ.

ಯುವರಾಜ್ ಅವರ ಈ ಮಹತ್ತರ ಸಾಧನೆಗೆ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ ಅಲೈಡ ಎಸ್. ಜೆ ಅವರು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಯುವರಾಜ್ ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸಿರುವ ಪ್ರಾಂಶುಪಾಲರು, ಮುಂದಿನ ದಿನಗಳಲ್ಲೂ ಅವರು ಇದೇ ರೀತಿಯ ಯಶಸ್ಸನ್ನು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

Share News
Exit mobile version