ಪುತ್ತೂರು: ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತನ್ನ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಕ್ಕೊಂದರಂತೆ ಕೆಪಿಎಸ್ ಶಾಲೆಯನ್ನು ಮಂಜೂರುಗೊಳಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಶ್ಮಿ ಮಹೇಶ್ ರವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.

ಗ್ರಾಮೀಣ ಭಾಗದ ಬಡ ಮಕ್ಕಳು ಗುಣ ಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಎಲ್ ಕೆ ಜಿ ಯಿಂದಲೇ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡುವಲ್ಲಿ ಸರಕಾರ ಮುತುವರ್ಜಿ ವಹಿಸಬೇಕಿದೆ. ಈ ಹಿಂದೆ ಸಾವಿರಾರುಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾದ ಕಾರಣ ಅವರ ಮುಂದಿನ ಉನ್ನತ ಶಿಕ್ಷಣ ಮುಙದುವರೆಸಲಾಗದೆ ನಷ್ಟ ಅನುಭವಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಟ್ಯಾಲೆಂಟ್ ಉಳ್ಳವರಾಗಿದ್ದು ಪ್ರಾಥಮಿಕ ಹಂತದಲ್ಲೇ ಅವರಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ಕೆಪಿಎಸ್ ( ಕರ್ನಾಟಕ ಪಬ್ಲಿಕ್ ಸ್ಕೂಲ್) ಪ್ರಾರಂಭ ಮಾಡಬೇಕಾದ ಅತೀ ಅಗತ್ಯವಿದೆ. ಈ ವಿಚಾರವನ್ನು ಈ ಹಿಂದೆ ಅಧಿವೇಶನದಲ್ಲಿ ಕೂಡಾ ಪ್ರಸ್ತಾಪ ಮಾಡಿದ್ದೆ ಎಂದು ಶಾಸಕರು ತಿಳಿಸಿದ್ದಾರೆ.