canaratvnews

ರಸ್ತೆ ಬದಿಗೆ ತ್ಯಾಜ್ಯ ಎಸೆದ ವ್ಯಕ್ತಿಗೆ ₹4,000 ದಂಡ ವಿಧಿಸಿದ ಕನ್ಯಾನ ಗ್ರಾಮ ಪಂಚಾಯತ್

ಮಂಗಳೂರು, ಜುಲೈ 9: ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆ ಬದಿಯಲ್ಲಿ ನಿಯಮ ಬಾಹಿರವಾಗಿ ತ್ಯಾಜ್ಯ ಎಸೆಯುವವರ ವಿರುದ್ಧ ಕನ್ಯಾನ ಗ್ರಾಮ ಪಂಚಾಯತ್ ಕಠಿಣ ಕ್ರಮ ಕೈಗೊಂಡಿದೆ. ಕನ್ಯಾನ-ಬೊಲ್ಪಾದೆ ರಸ್ತೆಯ ಕಳಂಜಿಮಲೆ ರಕ್ಷಿತಾರಣ್ಯದ ಬದಿಯಲ್ಲಿ ಕಸ ಚೆಲ್ಲಿ ಸ್ವಚ್ಛತಾ ನೀತಿಯನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಪತ್ತೆಹಚ್ಚಿ, ಪಂಚಾಯತ್ ವತಿಯಿಂದ 4,000 ರೂಪಾಯಿ ಭಾರಿ ದಂಡ ವಿಧಿಸಲಾಗಿದೆ.

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ರಕ್ಷಿತಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಕಾನೂನು ಬಾಹಿರವಾಗಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದರು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಸ ಎಸೆದ ಸಾರ್ವಜನಿಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವಚ್ಛತಾ ನಿಯಮಗಳನ್ನು ಗಾಳಿಗೆ ತೂರಿದ ಸದರಿ ವ್ಯಕ್ತಿಗೆ ಸ್ಥಳದಲ್ಲೇ ದಂಡದ ನೋಟಿಸ್ ಜಾರಿ ಮಾಡಲಾಗಿದೆ.
ಪಿಡಿಒ ಎಚ್ಚರಿಕೆ: ಈ ಕುರಿತು ಮಾಹಿತಿ ನೀಡಿರುವ ಕನ್ಯಾನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO), “ಪರಿಸರ ಮಾಲಿನ್ಯ ಉಂಟುಮಾಡುವ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಮಾಡುವ ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರಸ್ತೆ ಬದಿಗೆ ಅಥವಾ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುವುದು ಪುನರಾವರ್ತನೆಯಾದರೆ, ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು,” ಎಂದು ತೀವ್ರ ಎಚ್ಚರಿಕೆ ನೀಡಿದ್ದಾರೆ.
Share News
Exit mobile version