ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರೂ. 200.00 ಲಕ್ಷಗಳ (2 ಕೋಟಿ ರೂ.) ವಿಶೇಷ ಅನುದಾನದಡಿ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದಲ್ಲಿ ನಿರ್ಮಿಸಲಾಗಿರುವ ಭವ್ಯ ‘ಕನ್ನಡ ಭವನ’ ಉದ್ಘಾಟನೆಗೆ ಸಿದ್ಧವಾಗಿದೆ. ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ರವರ ಹೆಸರಿನಲ್ಲಿ ತಲೆಯೆತ್ತಿರುವ ಈ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿಕೊಡುವಂತೆ ಕೇರಳ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ವಿ.ಡಿ. ಸತೀಶನ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.

ದಿನಾಂಕ 22.07.2026 ರಂದು ಪ್ರಾಧಿಕಾರದ ಉನ್ನತ ಮಟ್ಟದ ನಿಯೋಗವು ಕೇರಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಮಂತ್ರಣ ಪತ್ರ ಸಲ್ಲಿಸಿತು. ಇದೇ ಸಂದರ್ಭದಲ್ಲಿ ಕಾಸರಗೋಡು ಭಾಗದ ಕನ್ನಡಿಗರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಸುದೀರ್ಘ ಮನವಿಯೊಂದನ್ನು ಹಸ್ತಾಂತರಿಸಲಾಯಿತು.
ಪ್ರಾಧಿಕಾರದ ನಿಯೋಗದ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಕೇರಳ ಮುಖ್ಯಮಂತ್ರಿಗಳು, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಉದ್ಘಾಟನಾ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ಜಂಟಿಯಾಗಿ ನಿಗದಿಪಡಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕಾಸರಗೋಡು ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಸಂಬಂಧಪಟ್ಟ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಸಿಎಂ ತಿಳಿಸಿದರು.
ಈ ಮಹತ್ವದ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಶ್ರೀ ಪ್ರಕಾಶ ಮತ್ತೀಹಳ್ಳಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್, ಪ್ರಮುಖರಾದ ಡಾ. ಪ್ರಸನ್ನ ರೈ, ಕೇರಳ ಗಡಿನಾಡು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್, ಬದಿಯಡ್ಕ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಮಾಹಿನ್ ಕೆಲೋಟ್, ಶ್ರೀ ಝಡ್.ಎ. ಕಯ್ಯಾರ್, ಡಾ. ಮಲ್ಲಿಕಾರ್ಜುನ್ ನಾಶಿ ಹಾಗೂ ಶ್ರೀ ಶರೀನ್ ಮೊಹಮ್ಮದ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.